ಮುಂಗಾರು ಮಳೆಯಿಂದಾಗಿ (mungaru male) ಭರಪೂರ ಯಶಕ್ಕೆ ಮೈಯೊಡ್ಡಿ ಮುದಗೊಂಡಿದ್ದವರು (golden star ganesh) ಗೋಲ್ಡನ್ ಸ್ಟಾರ್ ಗಣೇಶ್. ಒಂದು ಕಾಲದಲ್ಲಿ ತೀರಾ ಸಾಮಾನ್ಯ ಹುಡುಗನಾಗಿ, ಸಣ್ಣಪುಟ್ಟ ಅವಕಾಶಗಳಿಗೂ ಪರದಾಡುತ್ತಿದ್ದ ಗಣೇಶ್ (ganesh) ಬದುಕಲ್ಲಿ ಗೋಲ್ಡನ್ ಟೈಂ ಶುರುವಾಗಿ ಬಹಳಷ್ಟು ವರ್ಷಗಳೇ ಕಳೆದಿವೆ. ಆದರೆ, ಮುಂಗಾರು ಮಳೆಯನ್ನು ಸರಿಗಟ್ಟುವಂಥಾ ಮತ್ತೊಂದು ಗೆಲುವು ಮಾತ್ರ ಗಣೇಶ್ ಪಾಲಿಗೆ ಮರೀಚಿಕೆಯಾಗುಳಿದಿದೆ. ಈ ನಡುವೆ ಒಂದಷು ಸೋಲು, ತೊಡರು ತಿಡರುಗಳನ್ನು ದಾಟಿಕೊಂಡು, ಸಾವರಿಸಿಕೊಂಡು ನಿಂತಿರುವ ಗಣೇಶ್ ಇದೀಗ ಮತ್ತೊಂದು ಚಿತ್ರದತ್ತ ಚಿತ್ತ ಹರಿಸಿದ್ದಾರೆ. ಅದಕ್ಕೀಗ ಹೊಸಾ ಆವೇಗದ ಚಾಲನೆ ಸಿಕ್ಕಿದೆ.
ಗೋಲ್ಡನ್ ಸ್ಟಾರ್ ಪಾಲಿನ ನಲವತ್ತೊಂದನೇ ಈ ಚಿತ್ರಕ್ಕೆ `ಕೃಷ್ಣಂ ಪ್ರಣಯ ಸಖಿ’ ಎಂಬ ಶೀರ್ಷಿಕೆಯೂ ನಿಗಧಿಯಾಗಿದೆ. ಪ್ರೀತಿ, ಪ್ರೇಮ, ಭೋಳೇ ಸ್ವಭಾವದ ಪಾತ್ರಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಗಣೇಶ್, ಇತ್ತಿತ್ತಲಾಗಿ ಒಂದಷ್ಟು ಭಿನ್ನ ಬಗೆಯ ಪ್ರಯೋಗಗಳಿಗೂ ಒಡ್ಡಿಕೊಂಡಿದ್ದರು. ಆದರೀಗ ಅವರು ಮತ್ತೆ ಪ್ರಣಯದ ಗುಂಗಿಗೆ ಬಿದ್ದಂತಿದ್ದಾರೆ. ಗಣೇಶ್ ಸಿನಿಮಾಗಳು ಹೆಚ್ಚಾಗಿ ಪ್ರೀತಿ ಪ್ರೇಮ ಮತ್ತು ಅದರ ಸುತ್ತಲಿನ ಹಳವಂಡಗಳ ನಡುವೆ ಗಿರಕಿ ಹೊಡೆಯುತ್ತವೆ. ಆದ್ದರಿಂದಲೇ ಅವರ ಸಿನಿಮಾವೊಂದು ಘೋಷಣೆಯಾದೇಟಿಗೆ ನಾಯಕ ಯಾರೆಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿಕೊಳ್ಳುತ್ತದೆ. ಈ ಸಿನಿಮಾದ ಮಟ್ಟಿಗೆ ಹೇಳೋದಾದರೆ, ಮಲೆಯಾಳಿ ಹುಡುಗಿ ಮಾಳವಿಕಾ ನಾಯರ್ ಮಳೆ ಹುಡುಗನ ಮಗ್ಗುಲಲ್ಲಿ ಬಂದುನಿಂತಿದ್ದಾಳೆ.
ಈಗಾಗಲೇ ಮಲೆಯಾಳಂ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಒಂದಷ್ಟು ಹೆಸರು ಗಳಿಸಿಕೊಂಡು, ಒಂದಷ್ಟು ಗೆಲುವನ್ನೂ ಕಂಡಿರುವಾಕೆ ಮಾಳವಿಕಾ ನಾಯರ್. 2012ರಲ್ಲಿ ತೆರೆ ಕಂಡಿದ್ದ ಮಲೆಯಾಳದ `ಉಸ್ತಾದ್ ಹೋಟೇಲ್’ ಎಂಬ ಚಿತ್ರದ ಮೂಲಕ ಈಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಳು. ಆ ಮೊದಲ ಹೆಜ್ಜೆಯಲ್ಲಿಯೇ ಪುಷ್ಕಳ ಗೆಲುವೊಂದು ಮಾಳವಿಕಾಗೆ ದಕ್ಕಿತ್ತು. ಹಾಗೆ ಮಲೆಯಾಳಂನಲಿ ಒಂದಷ್ಟು ಸಿನಿಆಗಳಲ್ಲಿ ನಟಿಸಿದ್ದಮಾಳವಿಕಾ ಆ ನಂತರ ತಮಿಳಿನಲ್ಲಿಯೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ, ತೆಲುಗಿನಲ್ಲಿಯೂ ಬೇಡಿಕೆ ಗಿಟ್ಟಿಸಿಕೊಂಡಿದ್ದಳು. ಹೀಗೆ ದಕ್ಷಿಣ ಭಾರತೀಯ ಚಿತ್ರರರಂಗದ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿ, ಇದೀಗ ಗಣೇಶ್‍ಗೆ ಜೋಡಿಯಾಗಿ ಕನ್ನಡಕ್ಕೂ ಪಾದಾರ್ಪಣೆ ಮಾಡಿದ್ದಾಳೆ.
ಕೃಷ್ಣಂ ಪ್ರಣಯ ಸಖಿ ಎಂಬುದು ಗಣೇಶ್ ಪಾಲಿಗೆ ಮಹತ್ವದ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರರಂಗ ವಿಚಾರದಲ್ಲಿ ಹೇಳೋದಾದರೆ, ಒಂದು ಬಗೆಯ ಸಿನಿಮಾ ಯಶ ಕಂಡರೆ ಮತ್ತದೇ ಧಾಟಿಯಲ್ಲಿ ರೀಲು ಸುತ್ತುವ ಐಲು ಹತ್ತಿಕೊಳ್ಳುತ್ತೆ. ಆ ಭರಾಟೆಯಲ್ಲಿ ನಾಯಕ ನಟರೇ ಸೋಲಿನ ಕಹಿ ಉಣ್ಣ ಬೇಕಾಗುತ್ತದೆ. ಗಣೇಶ್ ಕೂಡಾ ಆ ದುರಂತವನ್ನು ದಾಟಿಕೊಂಡಿದ್ದಾರೆ. ಅದರ ಫಲವಾಗಿಯೇ ಒಂದಷ್ಟು ವಿಶಿಷ್ಟ ಬಗೆಯ ಸಿನಿಮಾಗಳಿಗೂ ತೆರೆದುಕೊಂಡಿದ್ದಾರೆ. ಅದರ ಬೆನ್ನಲ್ಲಿಯೇ ವಿಖ್ಯಾತ್ ನಿರ್ಮಾಣದ ಪ್ಯಾನಿಂಡಿಯಾ ಸಿನಿಮಾದಲ್ಲಿಯೂನಟಿಸುತ್ತಿದ್ದಾರೆ. ಸಮಯ ಸಂದರ್ಭ ಕೂಡಿ ಬಂದಿದ್ದರಿಂದ ಗಾಳಿಪಟ2 ಮೂಲಕ ಗಣೇಶ್‍ಗೆ ಸಣ್ಣ ಗೆಲುವೊಂದು ಸಿಕ್ಕಿತ್ತಷ್ಟೆ. ಆವರೇಜ್ ಸಿನಿಮಾಗಳಲ್ಲಿ ಕಳೆದು ಹೋಗಿದ್ದ ಗಣೇಶ್‍ಗೆ ಆ ಮೂಲಕ ಉಸಿರು ಸಿಕ್ಕಂತಾಗಿದೆ. ಈಗಿನ ಅವಕಾಶಗಳನ್ನು ಬಳಸಿಕೊಂಡು ಪ್ರೇಕ್ಷಕರನ್ನು ಬೆರಗುಗೊಳಿಸುವ ಅವಕಾಶಗಳು ಗೋಲ್ಡನ್ ಸ್ಟಾರ್ ಮುಂದಿದೆ. ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.