ಇಂದು ಗೋಲ್ಡನ್ ಸ್ಟಾರ್ ಗಣೇಶ್ (golden star ganesh) ಹುಟ್ಟುಹಬ್ಬ. ಈ ಸಂಭ್ರಮದ ಆಸುಪಾಸಿನಲ್ಲಿಯೇ ಗಣೇಶ್ ಅಭಿಮಾನಿಗಳು ಥ್ರಿಲ್ ಆಗುವಂಥಾ ಒಂದಷ್ಟು ಸಂಗತಿಗಳು ಜಾಹೀರಾಗುತ್ತಿವೆ. ಇತ್ತೀಚಿನವರೆಗೂ ಗಣೇಶ್‍ರ ಮುಂದಿನ ಸಿನಿಮಾ ಯಾವುದು? ಅದರ ರೂಪುರೇಷೆಗಳೇನು ಎಂಬ ಪ್ರಶ್ನೆಗಳು ಅಭಿಮಾನಿ ಬಳಗದ ಮನಸಿಗಂಟಿಕೊಂಡಿತ್ತು. ಹುಟ್ಟುಹಬ್ಬದ ಹೊಸ್ತಿಲಲ್ಲಿ ನಲವತ್ತೊಂದನೇ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳು ಜಾಹೀರಾಗಿದ್ದವು. ಬಹುಶಃ ಅದರ ಬೆನ್ನಲ್ಲಿಯೇ ನಲವತ್ತೆರಡನೇ ಚಿತ್ರದ ಬಗ್ಗೆ ಒಂದು ಬಿಗ್ ಅನೌನ್ಸ್ ಮೆಂಟ್ ಕಾದಿದೆ ಎಂಬ ವಿಚಾರವನ್ನು ಯಾರೆಂದರೆ ಯಾರೂ ಊಹಿಸಿರಲಿಕ್ಕಿಲ್ಲ. ಕಡೆಗೂ ಗೋಲ್ಡನ್ ಸ್ಟಾರ್ (golden star) ಬರ್ತ್‍ಡೇ ಗಿಫ್ಟ್ ಎಂಬಂತೆ ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಕಡೆಯಿಂದ ಪ್ಯಾನಿಂಡಿಯಾ ಇಂಡಿಯಾ ಚಿತ್ರ ಘೋಷಣೆಯಾಗಿದೆ. ಅದರ ಫಸ್ಟ್ ಲುಕ್ ಪೋಸ್ಟರ್ ಕಂಡು ಅಭಿಮಾನಿಗಳೆಲ್ಲ ಖುಷಿಗೊಂಡಿದ್ದಾರೆ!
ಇದು ಹೇಳಿಕೇಳಿ ಕನ್ನಡ ಚಿತ್ರರಂಗದ ಮಟ್ಟಿಗೆ ಪ್ಯಾನಿಂಡಿಯಾ ಸಿನಿಮಾಗಳ ಕಾಲಮಾನ. ಪ್ರತೀ ನಟರ ಅಭಿಮಾನಿ ಬಳಗವೂ ತಮ್ಮಿಷ್ಟದ ನಟ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಬೇಕೆಂಬ ಇರಾದೆ ಹೊಂದಿರುತ್ತಾರೆ. ಗಣೇಶ್ ಅಭಿಮಾನಿಗಳಲ್ಲಿಯೂ ಅಂಥಾದ್ದೊಂದು ಆಸೆ ಚಿಗಿರಿಕೊಂಡಿದ್ದರೆ ಅದು ಅತಿಶಯವೇನಲ್ಲ. ಈ ಹುಟ್ಟುಹಬ್ಬದ ಸಂದರ್ಭದಲ್ಲದು ಸಾಕಾರಗೊಂಡಿದೆ. ಯುವ ನಿರ್ಮಾಪಕ ವಿಖ್ಯಾತ್ ತಮ್ಮ ಬ್ಯಾನರಿನಡಿಯಲ್ಲಿ ಗಣೇಶ ಅವರ ನಲವತ್ತೆರಡನೇ ಚಿತ್ರವನ್ನು ನಿರ್ಮಾಣ ಮಾಡುವ ಖುಷಿಯ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಸದರಿ ಚಿತ್ರದ ಬಗೆಗಿನ ಒಂದಷ್ಟು ಮುಖ್ಯವಾದ, ಕುತೂಹಲಕರವಾದ ಸಂಗತಿಗಳನ್ನೂ ಹಂಚಿಕೊಂಡಿದ್ದಾರೆ.
ಹಾಗೆ ನೋಡಿದರೆ, ನಿರ್ಮಾಪಕರಾಗಿ ವಿಖ್ಯಾತ್ ಆದ್ಯತೆಗಳೇ ಭಿನ್ನ ಬಗೆಯವು. ಅವರ ನಿರ್ಮಾಣ ಸಂಸ್ಥೆಯ ಮೂಲಕ ತೆರೆಗಂಡಿರುವ ಸಿನಿಮಾಗಳ ಪಟ್ಟಿ ನೋಡಿದರೆ ಆ ವಿಚಾರ ಪಕ್ಕಾ ಆಗುತ್ತದೆ. ಸಾಮಾನ್ಯವಾಗಿ ಪ್ಯಾಬನಿಂಡಿಯಾ ಸಿನಿಮಾ ಅಂದಾಕ್ಷಣ ಈವಾಗಿನ ಟ್ರೆಂಡಿನ ಸುತ್ತ ಕಲ್ಪನೆಗಳು ಹರಳುಗಟ್ಟುತ್ತವೆ. ಆದರೆ ಈ ಸಿನಿಮಾ ಅದಕ್ಕೆ ಹೊರತಾಗಿರಲಿದೆಯಂತೆ. ಮೇಕಿಂಗ್, ಗುಣಮಟ್ಟದಲ್ಲಿ ಮತ್ತೊಂದು ದಿಕ್ಕು ತೋರಿಸುತ್ತಲೇ, ಕಥೆಯ ವಿಚಾರದಲ್ಲಿ ವಿಖ್ಯಾತ್ ಮತ್ತೆ ಭಿನ್ನ ಜಾಡಿನಲ್ಲಿಯೇ ಪಾದವೂರಿರುವ ಸೂಚನೆಗಳಿದ್ದಾವೆ. ಅದೆಲ್ಲವನ್ನು ಗಮನಿಸಿದರೆ, ಪ್ಯಾನಿಂಡಿಯಾ ಭರಾಟೆಯ ನಡುವೆ ಗಣೇಶ್‍ರ ನಲವತ್ತೆರಡನೇ ಚಿತ್ರ ಮಹತ್ವದ ಮೈಲಿಗಲ್ಲಾಗಬಲ್ಲ ಶುಭ ಸೂಚನೆಗಳೇ ಗೋಚರಿಸುತ್ತಿವೆ.
ಹಾಗಾದರೆ, ಈ ಸಿನಿಮಾದ ನಿರ್ದೇಶಕರ್ಯಾರು? ತಾರಾ ಬಳಗದಲ್ಲಿ ಯಾವ್ಯಾವ ಕಲಾವಿದರಿರಲಿದ್ದಾರೆ? ಹೀಗೆ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಸದ್ಯದ ಮಟ್ಟಿಗೆ ವಿಖ್ಯಾತ್ ಅಂಥಾ ಕುತೂಹಲ ಮತ್ತಷ್ಟು ನಿಗಿನಿಗಿಸುವಂತೆ ಮಾಡಿದ್ದಾರೆ. ಯಾಕೆಂದರೆ, ಆ ಮಾಹಿತಿಗಳನ್ನು ಇನ್ನೂ ಅವರು ಬಿಟ್ಟುಕೊಟ್ಟಿಲ್ಲ. ಒಟ್ಟರೆಯಾಗಿ ಈ ಸಿನಿಮಾದ ತಯಾರಿಗಳು ಜೋರಾಗಿಯೇ ನಡೆಯುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಕೂಡಾ ಶುರುವಾಗಲಿದೆ. ಅದರ ಆಸುಪಾಸಲ್ಲಿಯೇ ನಿರ್ದೇಶನ, ತಾರಾಗಣ, ತಾಂತ್ರಿಕ ವರ್ಗದ ಮಾಹಿತಿಗಳು ಒಂದೊಂದಾಗಿ ಹೊರಬೀಳಲಿದ್ದಾವೆ.
ಈ ಹಿಂದೆ ಮಾನ್ಸೂನ್ ರಾಗ ಅಂತೊಂದು ಸಿನಿಮಾ ತೆರೆಗಂಡಿತ್ತಲ್ಲಾ? ಭಿನ್ನ ಧಾಟಿಯ ಈ ಚಿತ್ರ ಕನ್ನಡ ಪ್ರೇಕ್ಷಕರ ಮನಸೂರೆಗೊಂಡಿತ್ತು. ಅದನ್ನು ತಮ್ಮ ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದವರು ಇದೇ ವಿಖ್ಯಾತ್. ಇದಲ್ಲದೇ ಪುಷ್ಪಕ ವಿಮಾನ, ರಂಗನಾಯಕ, ಇನ್ಸ್‍ಪೆಕ್ಟರ್ ವಿಕ್ರಂ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ವಿಖ್ಯಾತ್ ಗೆಲುವು ಕಂಡಿದ್ದಾರೆ. ಸಿದ್ಧಸೂತ್ರಗಳ ಬೆಂಬೀಳದೆ, ಕೇವಲ ವ್ಯಾಪಾರಿ ದೃಷ್ಟಿಯನ್ನು ಮಾತ್ರವೇ ಧರಿಸಿಕೊಳ್ಳದೆ, ವಿಭಿನ್ನ ಕಥೆಗಳನ್ನು ಮುಟ್ಟುವುದು ವಿಖ್ಯಾತ್ ಪ್ರೊಡಕ್ಷನ್ಸ್ ವಿಶೇಷತೆ. ಈ ಕಾರಣದಿಂದಲೇ ಗಣೇಶ್ ನಟನೆಯ 42ನೇ ಸಿನಿಮಾ ಬಗ್ಗೆ ವ್ಯಾಪಕ ಕುತೂಹಲ ಮೂಡಿಕೊಂಡಿದೆ.
ಇದೀಗ ಹೊರ ಬಂದಿರುವ ಪೋಸ್ಟರ್ ಲುಕ್ಕಿಗೂ ಪ್ರೇಕ್ಷಕರು ಮಾರು ಹೋಗಿದ್ದಾರೆ. ಮುಂಗಾರು ಮಳೆಯ ನಂತರ ಗಣೇಶ್ ಪಾಲಿಗೆ ಒಂದಷ್ಟು ಗೆಲುವುಗಳು ದಕ್ಕಿವೆ. ಸೋಲುಗಳೂ ಆಗಾಗ ಮುತ್ತಿಕ್ಕಿವೆ. ಆದರೆ, ಇದೆಲ್ಲದರಾಚೆಗೆ ಮುಯಂಗಾರುಮಳೆಯನ್ನೇ ಸರಿಗಟ್ಟುವ ಗೆಲುವಿಗಾಗಿ ಗಣೇಶ್ ಅಭಿಮಾನಿಗಳು ಕಾದು ಕೂತಿದ್ದಾರೆ. ಓರ್ವ ನಟನಾಗಿ ಅಂಥಾದ್ದೊಂದು ಮೀರಿಕೊಳ್ಳುವ ಬಯಕೆ ಖುದ್ದು ಗಣೇಶ್‍ರಲ್ಲಿಯೂ ಇದ್ದೇ ಇರುತ್ತದೆ. ಇತ್ತೀಚೆಗೆ ತೆರೆಕಂಡಿದ್ದ ಗಾಳಿಪಟ2 ಕೂಡಾ ಗೆದ್ದಿತ್ತು. ಆದರೆ, ಮಹಾಗೆಲುವೊಂದರ ನಿರೀಕ್ಷೆ ಈ ನಲವತ್ತೆರಡನೇ ಚಿತ್ರದ ಮೂಲಕ ಸಾಕಾರಗೊಳ್ಳುವ ಲಕ್ಷಣಗಳೇ ದಟ್ಟೈಸಿಕೊಂಡಿದೆ!