ಕಲೆಯನ್ನೇ ನಂಬಿ ಬದುಕೋ ಜೀವಗಳನ್ನು ಸುತ್ತಿಕೊಳ್ಳುವ ಸಂಕಷ್ಟಗಳು ನೂರಾರು. ಅಂಥಾ ಸಾವಿರ ಸವಾಲುಗಳಿಗೆ ಎದೆಗೊಟ್ಟು, ಏಳುಬೀಳುಗಳನ್ನು ಅವುಡುಗಚ್ಚಿ ಸಹಿಸಿಕೊಂಡು, ಎಡವಿದಾಗೆಲ್ಲ ಸಾವರಿಸಿಕೊಂಡು ಕಲೆಯನ್ನೇ ಉಸಿರೆಂದುಕೊಂಡವರು ಮಾತ್ರವೇ ಕಲಾವಿದರಾಗಿ ನೆಲೆ ಕಂಡುಕೊಳ್ಳುತ್ತಾರೆ. ಕನ್ನಡದ ಮಟ್ಟಿಗೆ ಹೇಳುವುದಾದರೆ, ಹೀಗೆ ಮೇಲೆದ್ದು ಬಂದು ಅಭಿಜಾತ ಕಲಾವಿದರಾಗಿ ನೆಲೆ ಕಂಡುಕೊಂಡ ಕೆಲವರಿದ್ದಾರೆ. ಆ ಯಾದಿಯಲ್ಲಿ ಮುಂಚೂಣಿಯಲ್ಲಿರುವವರು (vaijanath biradar) ವೈಜನಾಥ ಬಿರಾದಾರ್. ನಟನಾಗಿ ನಾನಾ ಪಾತ್ರಗಳ ಮೂಲಕ ಪಳಗುತ್ತಾ ಬಂದರುವ ಅವರೀಗ `90 ಬಿಡಿ ಮನೀಗ್ ನಡಿ’ ಅಂತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅದು ಈ ವಾರ ರಾಜ್ಯಾದ್ಯಂತ ತೆರೆಗಾಣುತ್ತಿದೆ.
ಇದು ವೈಜನಾಥ್ ಬಿರಾದಾರ್ (vaijanath biradar} ಪಾಲಿಗೆ ಐನೂರನೇ ಚಿತ್ರ. ಬಹುಶಃ ಇದು ಯಾವ ನಟ ನಟಿಯರ ಪಾಲಿಗಾದರೂ ಅತ್ಯಂತ ಸಂತೋಷದ ಘಟ್ಟ. ವಿಶೇಷವೆಂದರೆ, ಇಂಥಾದ್ದೊಂದು ಸಂಭ್ರಮದ ಬಿಂದುವಿನಲ್ಲಿ, ಮತ್ತೊಂದಷ್ಟು ಸಂತಸಗಳೂ ಬಿರಾದಾರ್ ಅವರ ವಿಚಾರದಲ್ಲಿ ಜಮೆಯಾಗುತ್ತಿವೆ. ಯಾಕೆಂದರೆ, ಈ ಐನೂರರ ಗಡಿಯಂಥಾ ಚಿತ್ರದ ಮೂಲಕವೇ ಬಿರಾದಾರ್ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ. ಅದು ಬಿಡುಗಡೆಗೊಳ್ಳುತ್ತಿರುವ ಈ ಹೊತ್ತಿನಲ್ಲಿಯೇ ಅವರು ಎಪ್ಪತ್ತನೇ ವರ್ಷದ ಹುಟ್ಟುಹಬ್ವನ್ನು ಆಚರಿಸಿಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ಸದರಿ ಸಿನಿಮಾ ಯಶ ಕಂಡರೆ, ಅದು ಬಿರಾದಾರ್ ಪಾಲಿನ ಮತ್ತೊಂದು ಖುಷಿಯಾಗಿ, ಗರಿಮೆಯಾಗಿ ದಾಖಲಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಅಂದಹಾಗೆ, ಈ ಚಿತ್ರ ಒಂದಷ್ಟು ಮಹತ್ವಾಕಾಂಕ್ಷೆಯೊಂದಿಗೆ, ಬಹಳಷ್ಟು ಹೊಸತನದೊಂದಿಗೆ ತಯಾರಾಗಿರೋ ಸುಳಿವುಗಳಿವೆ. ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಸೇರಿಕೊಂಡು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರತ್ನಮಾಲಾ ಬಾದರದಿನ್ನಿ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಟ್ರೈಲರ್ ಬಿಡುಗಡೆಯಾದಾಗಲೇ ಒಂದಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದವು. ಅದುವೇ ಪ್ರೇಕ್ಷಕರಲ್ಲೊಂದು ಕುತೂಹಲ ಜಾರಿಯಲ್ಲಿರುವಂತೆ ಮಾಡುವಲ್ಲಿಯೂ ಯಶ ಕಂಡಿತ್ತು. ಕಾಮಿಡಿಯೊಂದಿಗೆ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳ್ನೂ ಬೆರೆಸಿ ರೂಪಿಸಿರುವ ಈ ಚಿತ್ರ, ಎಲ್ಲ ವರ್ಗದ ಪ್ರೇಕ್ಷಕರನ್ನೂ ಖುಷಿಗೊಳಿಸಲಿದೆ ಎಂಬ ನಂಬುಗೆ ಚಿತ್ರತಂಡದಲ್ಲಿದೆ.
ಈ ಸಿನಿಮಾದ ಕಥೆ ಬಹುಪಾಲು ಉತ್ತರ ಕರ್ನಾಟಕ ಸೀಮೆಯಲ್ಲಿಯೇ ಘಟಿಸುತ್ತದೆಯಂತೆ. ಅದರ ಪ್ರಧಾನ ಪಾತ್ರವನ್ನು ಉತ್ತರ ಕರ್ನಾಟಕ ಸೀಮೆಯ ಕಲಾವಿದನೇ ನಿಭಾಯಿಸಬೇಕೆಂಬುದು ನಿರ್ದೇಶಕರುಗಳ ಅಭಿಲಾಶೆಯಾಗಿತ್ತು. ಅದಕ್ಕೆ ಬಿರಾದಾರ್ ಅವರಿಗಿಂತ ಸೂಕ್ತ ವ್ಯಕ್ತಿ ಬೇರೊಬ್ಬರಿಲ್ಲ ಎಂಬ ತೀರ್ಮಾನಕ್ಕೂ ಅಸವರು ಬಂದು ಬಿಟ್ಟಿದ್ದರು. ಬಿರಾದಾರ್ ಕೂಡಾ ಕಲಾವಿದನಾಗಿ ತಮ್ಮ ಐನೂರನೇ ಯಾನವನ್ನು ಈ ಚಿತ್ರದ ಮೂಲಕವೇ ಸಂಪನ್ನಗೊಳಿಸಿಕೊಳ್ಳುವ ಮನಸು ಮಾಡಿದ್ದರು. ಅದರ ಫಲವಾಗಿಯೇ ಈ ಸಿನಿಮಾವೀಗ ಅಚ್ಚುಕಟ್ಟಾಗಿ ರೂಪುಗೊಂಡು, ಈ ವಾರ ಪ್ರೇಕ್ಷಕರ ಮುಂದೆ ಬರುವ ತರಾತುರಿಯಲ್ಲಿದೆ.
ಶೀರ್ಷಿಕೆಯೇ ಸೂಚಿಸುವಂತೆ ಕುಡುಕರ ಮನೋಭೂಮಿಕೆಯ ಸುತ್ತ ಕದಲುವ ಕಥೆ ಇಲಿರಬಹುದೆಂದು ಅಂದಾಜಿಸಬಹುದು. ಆದರೆ, ಅಂದಾಜಿಗೆ ನಿಲುಕದ ಒಂದಷ್ಟು ತಿರುವುಗಳು ಈ ಚಿತ್ರದಲ್ಲಿರಲಿವೆಯಂತೆ. ಒಟ್ಟಾರೆಯಾಗಿ ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ಬಿರಾದಾರ್ ನೈಂಟಿ ಗುಂಗಿನಲ್ಲಿ ಥರ ಥರದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಕಾಲದಲಿ ಒಂದು ಬಗೆಯ ಪಾತ್ರಗಳಿಗೆ ಮಾತ್ರವೇ ಸೀಮಿತವಾಗಿದ್ದ, ಆ ನಂತರ ಥರ ಥರದ ಪಾತ್ರಗಳ ಮೂಲಕ ಸೀಮೋಲಂಘನ ಮಾಡಿದ್ದ ಬಿರಾದಾರ್, ಓರ್ವ ನಟನಾಗಿ ಕಡುಗಷ್ಟದ ದಿನಗಳನ್ನು ಕಂಡವರು. ಆ ನೋವನ್ನು ಎದೆಯಲ್ಲಿಟ್ಟುಕೊಂಡೇ ಪಾತ್ರಗಳನ್ನು ಒಳಗಿಳಿಸಿಕೊಂಡು ನಟಿಸಿದವರು. ಈ ಮೂಲಕವೇ ಕನ್ನಡ ಚಿತ್ರರಂಗದ ಪುಟಗಳಲ್ಲಿ ತನ್ನದೇ ಛಾಪು ಮೂಡಿಸಿರುವ ಬಿರಾದಾರ್ ನಾಯಕನಾಗಿ ಹೇಗೆ ಕಂಗೊಳಿಸಿದ್ದಾರೆ? ಅವರ ಪಾತ್ರದ ಚಹರೆಗಳೇನು ಎಂಬುದಕ್ಕೆಲ್ಲ ದಿನದೊಪ್ಪತ್ತಿನಲ್ಲಿಯೇ ನಿಖರ ಉತ್ತರ ಸಿಗಲಿದೆ.