ಕಾಂತಾರ (kanthara) ಚಿತ್ರಕ್ಕೆ ದಕ್ಕಿದ ಮಹಾ ಯಶಸ್ಸಿನ ಪ್ರಭೆಯಿನ್ನೂ ಮಿಣುಕು ಹಾಕುತ್ತಿದೆ. ಇದೇ ಹೊತ್ತಿನಲ್ಲಿ ಆ ಯಶದ ರೂವಾರಿಯಾದ ರಿಷಭ್ ಶೆಟ್ಟಿ (rishabh shetty) ಕಾಂತಾರ ಸೀಕ್ವೆಲ್‍ಗಾಗಿ ತಯಾರಿ ನಡೆಸುತ್ತಿದ್ದಾರೆ. ಶೆಟ್ಟರೀಗ ಕುಂಗ್‍ಫೂ, ಕಳರಿಯಪಯಟ್‍ನಂಥ ಸಮರ ಕಲೆಗಳನ್ನು ಕಲಿಯುವಲ್ಲಿ ಮಗ್ನರಾಗಿದಾರೆಂಬಂಥಾ ಸುದ್ದಿಗಳೂ ಹಬ್ಬಿಕೊಳ್ಳುತ್ತಿವೆ. ಪಕ್ಕಾ ವ್ಯವಹಾರಸ್ಥರಾದ ಶೆಟ್ಟರು ಇದೆಲ್ಲದರ ಗ್ಯಾಪಿನಲ್ಲಿ ಸಿನಿಮಾ ಮಾರ್ಕೆಟಿಂಗ್ ಕಂಪೆನಿಯೊಂದನ್ನು ಹುಟ್ಟು ಹಾಕಿ, ಅದರ ದೇಖಾರೇಖಿಯನ್ನು ಮಡದಿ ಪ್ರಗತಿಯ (pragathi shetty) ನಿಗಾವಣೆಗೆ ಬಿಟ್ಟು ನಿರಾಳವಾಗಿದ್ದಾರೆ. ರಿಷಭ್ ಅಂದ ಮೇಲೆ ಅವರು ಹೀಗೆ ಸಿನಿಮಾ ಸಂಬಂಧಿತವಾಗಿ ಸುದ್ದಿಯಲ್ಲಿರೋದು ವಿಶೇಷವೇನಲ್ಲ. ಆದರೆ, ಈಗ `ಸಿನಿ ಶೋಧ’ ಕಲೆಹಾಕಿರುವ ಮಾಹಿತಿ ಸಿನಿಮಾತೀತವಾದದ್ದು. ಅದರನ್ವಯ ಹೇಳೋದಾದರೆ, ಕಾಂತಾರ (kanthara shiva) ಶಿವನನ್ನು ರಾಜಕಾರಣಿಯಾಗಿಸುವ ಕಸರತ್ತೊಂದು ಚಾಲ್ತಿಯಲ್ಲಿದೆ. ಅದು ಈ ಕ್ಷಣದಲ್ಲಿ ಮತ್ತಷ್ಟು ವೇಗ ಪಡೆದುಕೊಂಡಿದೆ.
ಹಾಗೆ ನೋಡಿದರೆ, ಸಿನಿಮಾ ನಟರು ರಾಜಕರಣಿಗಳಾಗೋದು ಹೊಸತನಲ್ಲ. ಆದರೆ, ಪಕ್ಕದ (tamilnadu) ತಮಿಳುನಾಡು ಮುಂತಾದ ರಾಜ್ಯಗಳಲ್ಲಿರುವಂಥಾ ಕ್ರೇಜ್ ಇಲ್ಲಿಲ್ಲವಷ್ಟೇ. ರೆಬೆಲ್ ಸ್ಟಾರ್ ಅಂಬರೀಶ್, ಜಗ್ಗೇಶನಂಥಾ ನಟರು ರಾಜಕಾಣಿಗಾಗಿದ್ದರೂ ಕಡಿದು ಕಟ್ಟೆ ಹಾಕಿದದೇನೂ ಇಲ್ಲ. ಜಗ್ಗಣ್ಣನಂತೂ ತನ್ನ ವಿಚಿತ್ರ ವಿಚಾರಧಾರೆ, ಅಬ್ರಕದಬ್ರ ಬರವಣಿಗೆಗಳ ಮೂಲಕ ನಗೆಪಾಟಲಿಗೀಡಾಗಿದ್ದೇ ಹೆಚ್ಚು. ನಟನಾಗಿರುವಾಗಲೇ ಕಾಸು ಕೊಟ್ಟು ಸಿನಿಮ ನೋಡೋ ಮಂದಿಯ ಸಂಷ್ಟಕ್ಕೆ ಮಿಡಿಯದವರು, ರಾಜಕಾರಣಿಗಳಾಗಿ ಗುಡ್ಡೆ ಹಾಕೋದೇನಿಲ್ಲ ಎಂಬಷ್ಟು ಪ್ರಬುದ್ಧತೆ ಕರುನಾಡಿನ ಮತದಾರರಿಗಿದೆ. ಆದರೂ ಕೂಡಾ ಕಾಂತಾರ ಶಿವನನ್ನು ರಾಜಕೀಯಕ್ಕೆ ಎಳೆತಂದು, ಒಂದು ಲೋಕಸಭಾ ಸೀಟನ್ನು ನಿಕ್ಕಿ ಮಾಡಿಕೊಳ್ಳುವ ತರಾತುರಿಯೊಂದು ಬಿಜೆಪಿ ಪಾಳೆಯದಲ್ಲಿ ಢಾಳಾಗಿಯೇ ಕಾಣಿಸುತ್ತಿದೆ.
ಹಾಗಾದರೆ, ರಿಷಭ್ ಶೆಟ್ಟರನ್ನು ಕರೆತರಲು ಯಾಕಾಗಿ ಪ್ರಯತ್ನ ನಡೆಯುತ್ತಿದೆ? ಇದಕ್ಕೆ ರಿಷಭ್ ಶೆಟ್ಟಿ ಕಡೆಯಿಂದ ಒಪ್ಪಿಗೆ ಸಿಕ್ಕಿದೆಯಾ? ಹಾಗೊಂದು ವೇಳೆ ಅವರು ಒಪ್ಪಿಕೊಂಡರೆ ಕರ್ನಾಟಕದ ಯಾವ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ? ಇಂಥಾ ಸಾಲು ಸಾಲು ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಈ ನಿಟ್ನಲ್ಲಿ ತಲಾಷಿಗಿಳಿದರೆ, ಒಂದಷ್ಟು ಸೂಕ್ಷ್ಮ ಸಂಗತಿಗಳು ಜಾಹೀರಾಗುತ್ತವೆ. ಸದ್ಯದ ಮಟ್ಟಿಗೆ ಹೇಳುವುದಾದರೆ, ಬಿಜೆಪಿ ಪಾಳೆಯದಲ್ಲಿ ಅಂಥಾದ್ದೊಂದು ಅನಿವಾರ್ಯತೆ ಇರುವುದು ಸುಳ್ಳೇನಲ್ಲ. ಯಾಕೆಂದರೆ, ರಾಜ್ಯದಲ್ಲಿ ಅಧಿಕಾರದಲ್ಲಿದ್ದಷ್ಟೂ ದಿನ ಕೆಲಸಕ್ಕ ಬಾರದ ವಿಚಾರಗಳನ್ನು ಬೆದಕುತ್ತಾ ಕೂತಿದ್ದರ ಫಲವಾಗಿ ಹೀನಾಯ ಸೋಲೊಂದು ಬಿಜೆಪಿಗರನ್ನು ಕಂಗಾಲಾಗಿಸಿದೆ. ಅದರ ಛಾಯೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲಿಸದಂತೆ ನೋಡಿಕೊಳ್ಳಬೇಕೆಂಬ ಖಡಕ್ಕು ಸೂಚನೆ ಈಗಾಗಲೇ ಹೈಕಮಾಂಡಿನಿಂದ ವಾನೆಯಾಗಿದೆ.
ಇಂಥಾ ಹೊತ್ತಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲೋಕಸಭಾ ಸೀಟುಗಳನ್ನು ಗೆದ್ದುಕೊಳ್ಳುವ ಸವಾಲು ರಾಜ್ಯ ಬಿಜೆಪಿ ನಾಯಕರ ಮುಂದಿದೆ. ಅತ್ತ ಯಡಿಯೂರಪ್ಪನವರನ್ನು ಒತ್ತಾಯಪೂರ್ವಕವಾಗಿ ಮನೆಗೆ ಗದುಮಲಾಗಿದೆ. ಯಡ್ಡಿಯನ್ನು ಮೀರಿಸುವ ನಾಯಕತ್ವ ಬಿಜೆಪಿಯಲ್ಲಿದೆ ಅಂತ ತೋರಿಸಿಕೊಳ್ಳುವ ಸಣ್ಣ ಅವಕಾಶವನ್ನೂ ಕೂಡಾ ಯಡ್ಡಿ ವಿರೋಧಿ ಕೂಟ ಈಗಾಗಲೇ ಕಳೆದುಕೊಂಡಿದೆ. ಯಡ್ಡಿಯಾಚೆಗೆ ಬಿಜೆಪಿಯಲ್ಲಿ ಯಾವ ಬಗೆಯ ನಾಯಕತ್ವವಿದೆ ಅಂತ ಒಮ್ಮೆ ಕಣ್ಣಾಡಿಸಿದರೆ ಕಾಣ ಸಿಗೋದು ಅದೇ ಪಿಟೀಲು ಬ್ರ್ಯಾಂಡಿನ ಕಟೀಲು, ಹರುಕುಬಾಯಿ ಯತ್ನಾಳ್, ಪದ್ಮನಾಭನಗರಕ್ಕಷ್ಟೇ ಸೀಮಿತವಾದ ಆರ್.ಅಶೋಕ್, ಸೋತು ಮೂಲೆ ಸೇರಿರುವ ಗಡ್ಡದ ರವಿ ಮತ್ತು ಸೋತರೂ ಗೆದ್ದರೂ ನಗುನಗುತ್ತಾ ನಿರುಮ್ಮಳವಾಗಿರುವ ಸದಾನಂದಗೌಡರಂಥಾ ಸವಕಲು ಎಲಿಮೆಂಟುಗಳು ಮಾತ್ರ!
ಹೀಗಿರುವಾಗ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಸ್ಟರ್ ಸ್ಟ್ರೋಕ್ ಒಂದನ್ನು ಪ್ರಯೋಗಿಸಲು ಬಿಜೆಪಿ ಪಟಾಲಮ್ಮಿನ ನಡುವೆ ಚರ್ಚೆಗಳು ನಡೆಯುತ್ತಿವೆ. ಒಂದಷ್ಟು ಬಾರಿ ಗೆದ್ದು, ಜನವಿರೋಧ ಕಟ್ಟಿಕೊಂಡವರು, ಕಾಮಿಡಿ ಪೀಸುಗಳಂತಾಗಿರುವವರು ಮತ್ತು ನಿಷ್ಪ್ರಯೋಜಕರೆಂಬ ಪಟ್ಟ ಕಟ್ಟಿಕೊಂಡವರನ್ನೆಲ್ಲ ಸೈಡಿಗೆ ಸರಿಸುವ ಸ್ಪಷ್ಟ ಸೂಚನೆ ಆ ದಿಕ್ಕಿನಿಂದ ಗೋಚರಿಸಲಾರಂಭಿಸಿದೆ. ಹಾಗಾದರೆ, ಹಳಬರನ್ನು ಬದಿಗೆ ಸರಿಸಿದರೆ ಪಟ್ಟ ಕಟ್ಟೋದು ಯಾರಿಗೆ? ಇದು ಬಿಜೆಪಿ ಪಾಳೆಯವನ್ನು ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. ಸದ್ಯದ ಪರಿಸ್ಥಿತಿಯಲ್ಲಿ ಒಂದೆರಡು ಕ್ಷೇತ್ರಗಳ ಮಟ್ಟಿಗೆ ಆಶಾದಾಯಕವಾಗಿ ಕಾಣಿಸುತ್ತಿರೋದು ಕಾಂತಾರ ಶಿವ!
ಇದೀಗ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಲೋಕಸಭಾ ಸದಸ್ಯೆಯಾಗಿದ್ದಾರೆ. ಈ ವಿಚಾರ ಶೋಭಕ್ಕನಿಗೆ ನೆನಪಿದೆಯೋ, ಇಲ್ಲವೋ ಗೊತ್ತಿಲ್ಲ; ಆ ಕ್ಷೇತ್ರದ ಬಡಪಾಯಿ ಮತದಾರಿಗಂತೂ ಅದು ಮರೆತು ಹೋಗಿ ಯಾವ ಕಾಲವೋ ಆಗಿಹೋಗಿದೆ. ಅಷ್ಟಕ್ಕೂ ಶೋಭಾ ಈ ಭಾಗದಿಂದ ಗೆದ್ದು ಹೋಗಿದ್ದೇ ಮೋದಿ ಅಲೆಯೆಂಬೋ ಮಾಯೆಯ ಬೆನ್ನೇರಿ. ಹಾಗೆ ಮೊದಲ ಸಲ ಗೆದ್ದ ಬಳಿಕವೂ ಶೋಭಾ ಮುಗುಮ್ಮಾಗಿದ್ದರು. ಓಟು ಕೇಳಲು ಬಂದ ಬಳಿಕ ಆಕೆ ಕ್ಷೇತ್ರದ ಜನರಿಗೆ ಸಿಕ್ಕಿದ್ದೇ ಅಪರೂಪ. ಆ ಬಳಿಕ ಎರಡನೇ ಬಾರಿ ಶೋಭಾರನ್ನೇ ಕಣಕ್ಕಿಳಿಸಿದಾಗ ಈ ಕ್ಷೇತ್ರದಲ್ಲಿ ಬಿಜೆಪಿ ಪಾಳೆಯವೇ ಚದುರಿ ಚೆಲ್ಲಾಪಿಲ್ಲಿಯಾಗಿತ್ತು. ಎರಡನೇ ಬಾರಿಯೂ ಮೋದಿ ಅಲೆಯಲ್ಲಿ ತೇಲಿ ದಡ ಸೇರಿದ್ದ ಶೋಭಾ, ಈ ವರೆಗೂ ಅಲಿಂದ ಬಂದು ಜನರೊಂದಿಗೆ ಬೆರೆಯುವ ಮನಸು ಮಾಡಿಲ್ಲ.
ಈ ಬಾರಿಯೇನಾದರೂ ಶೋಭಾ ಕರಂದ್ಲಾಜೆಯೇ ಈ ಭಾಗದಿಂದ ಕಣಕ್ಕಿಳಿದರೆ ಸೋಲೆಂಬುದು ಕಟ್ಟಿಟ್ಟ ಬುತ್ತಿ. ಯಾಕೆಂದರೆ, ಅದು ಕೆಲ ಬಿಜೆಪಿ ನಿಷ್ಟಾವಂತರಿಗೇ ಪಥ್ಯವಾಗೋದಿಲ್ಲ. ಆದ್ದರಿಂದ ಈ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಹೊಸಾ ಕ್ಯಾಂಡಿಡೇಟು ಹುಡುಕುವ ಅನಿವಾರ್ಯತೆ ಬಂದೊದಗಿದೆ. ಈ ಸಲ ರಿಷಭ್ ಶೆಟ್ಟಿಯನ್ನೇ ಈ ಕ್ಷೇತ್ರದಿಂದ ಕಣಕ್ಕಿಳಿಸಬೇಕೆಂಬ ಉಮೇದುವಾರಿಕೆ ದಟ್ಟವಾಗಿ ಕಾಣಿಸುತ್ತಿದೆ. ಹೇಳಿಕೇಳಿ ದಕ್ಷಿಣ ಕನ್ನಡದ ಸಂಸ್ಕøತಿ, ಅಲ್ಲಿನ ದೈವಗಳೆಡೆಗಿನ ನಂಬುಗೆಗಳೆಲ್ಲ ಮಲೆನಾಡಿಗೂ ಪಸರಿಸಿಕೊಂಡಿದೆ. ಈ ಕಾರಣದಿಂದಲೇ ಕಾಂತಾರ ಮೂಲಕ ರಿಷಭ್ ಆ ಭಾಗದ ಜನರಿಗೆ ಹತ್ತಿರಾಗಿದ್ದಾರೆ. ಹೀಗಿರುವಾಗ ರಿಷಭ್ ಕಣಕ್ಕಿಳಿದರೆ ಗೆಲುವು ಗ್ಯಾರೆಂಟಿ ಎಂಬಂಥಾ ಲೆಕ್ಕಾಚಾರ ಬಿಜೆಪಿಗರದ್ದು.
ಈಗಿರುವ ವಾತಾವರಣವನ್ನು ಆಧರಿಸಿ ಹೇಳೋದಾದರೆ, ಬಿಜೆಪಿಗರ ಲೆಕ್ಕಾಚಾರವನ್ನು ಪೂರ್ತಿಯಾಗಿ ಅಲ್ಲಗಳೆಯಲೂ ಸಾಧ್ಯವಿಲ್ಲ. ಕಾಂತಾರ ಮೂಲಕ ಜನರನ್ನು ಭಕ್ತಿಪೂರ್ವಕವಾಗಿ ಸೆಳೆದುಕೊಂಡಿರುವ ರಿಷಭ್, ಆಗಾಗ ಮೋದಿ ಜಪ ಮಾಡುವ ಮೂಲಕ ಬಿಜೆಪಿ ಬೆಂಬಲಿಗರ ಮನಸೂರೆಗೊಂಡಿದ್ದಾರೆ. ಒಂದು ವೇಳೆ ಅವರು ಅಖಾಡಕ್ಕಿಳಿದರೆ ಎಲ್ಲವೂ ಸೇರಿಕೊಂಡು ಸಕಾರಾತ್ಮಕ ಪರಿಸರ ನಿರ್ಮಾಣ ಮಾಡಲೂ ಬಹುದು. ಹಾಗಂತ, ರಿಷಭ್‍ಗಿರೋ ಆಯ್ಕೆ ಉಡುಪಿ-ಚಿಕ್ಕಮಗಳೂರು ಮಾತ್ರವೇ ಅಲ್ಲ; ಮತ್ತೊಂದು ಆಯ್ಕೆಯೂ ಅವರ ಮುಂದಿದೆ. ಅದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ!
ದಕ್ಷಿಣ ಕನ್ನಡ ಹೇಳಿಕೇಳಿ ಇತ್ತೀಚಿನ ದಿನಗಳಲ್ಲಿ ಹಿಂದೂತ್ವದ ದಾವನಲದಂತಾಗಿದೆ. ಹಿಂದೂತ್ವವನ್ನು ಜಪಿಸುತ್ತಲೇ ಆ ಕ್ಷೇತ್ರವನ್ನು ಮೂರು ಬಾರಿ ಗೆದ್ದುಕೊಂಡಿರುವಾತ ನಳೀನ್ ಕುಮಾರ್ ಕಟೀಲ್. ಒಂದು ಕಾಲಕ್ಕೆ ಕಾಂಟ್ರಾಕ್ಟರ್ ಆಗಿದ್ದ ಕಟೀಲು, ಆ ನಂತರ ಆರೆಸೆಸ್ ಪಾಳೆಯ ಸೇರಿಕೊಂಡು ಬೆಳೆದು ಬಂದವರು. ಮಹೇಂದ್ರ ಕುಮಾರ್ ಭಜರಂಗಧಳದಲ್ಲಿದ್ದಾಗ ಅವರ ಹಾರ ತುರಾಯಿ ಹಿಡಿದು ನಿಲ್ಲುತ್ತಿದ್ದ ಕಟೀಲು, ಬಿಜೆಪಿಯ ರಾಜ್ಯಾಧ್ಯಕ್ಷನಾಗಿದ್ದೇ ಒಂದು ಅಚ್ಚರಿ. ಆದರೆ, ಫಟಿಂಗ ರಾಜಕಾರಣದ ಪಾಂರಂಗತರಾದ ಶ್ರೀಯುತರು ತಾನೋರ್ವ ಅಸಮರ್ಥ ನಾಯಕ ಎಂಬುದನ್ನು ಈ ಬಾರಿಯ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಮೂಲಕ ಸಾಬೀತುಪಡಿಸಿಕೊಂಡಿದ್ದಾರೆ. ಇದೆಲ್ಲದರಿಂದಾಗಿ ಈ ಬಾರಿ ನಳೀನ್‍ಗೆ ಟಿಕೆಟು ಸಿಗೋದು ಡೌಟು. ಹಾಗೊದು ವೇಳೆ ನಳೀನ್‍ರನ್ನು ಮನೆಗೆ ಕಳಿಸಿದರೆ, ಆ ಜಾಗಕ್ಕೆ ರಿಷಭ್ ಶೆಟ್ಟಿ ಬಂದು ನಿಲ್ಲುವ ಅವಕಾಶಗಳೂ ಇದ್ದಾವೆ.
ಒಂದು ಮೂಲದ ಪ್ರಕಾರ, ಕಾಂತಾರ ನಂತರದ ಬೆಳವಣಿಗೆಗಳಲ್ಲಿ ದಕ್ಷಿಣ ಕನ್ನಡ ಭಾಗದ ಬಿಜೆಪಿ ಮಖಂಡರು ರಿಷಭ್‍ರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ತತ್‍ಕ್ಷಣದ ನಿರ್ಧಾರದಿಂದ ಬಚಾವಾಗುತ್ತಾ ಬಂದಿರುವ ಚಾಲಾಕಿ ರಿಷಭ್, ನಿರ್ಧಾರ ಪ್ರಕಟಿಸದೆ ಕಾಂತಾರ ಮುಂದುವರೆದ ಭಾಗದಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟಕ್ಕೂ ರಿಷಭ್ ಆಗಾಗ ಮೋದಿ ಭಜನೆ ಮಾಡುತ್ತಲೇ ಬರುತ್ತಿದ್ದಾರೆ. ಇತ್ತೀಚೆಗೆ ಮೋದಿಯನ್ನು ಭೇಟಿಯಾಗಿ ಖುಷಿಗೊಂಡಿದ್ದಾರೆ. ಹೀಗೆ ದೂರದಿಂದ ಮೋದಿಯನ್ನು ಕೊಂಡಾಡುತ್ತಿರುವ ರಿಷಭ್‍ಗೆ, ಅವರ ಕ್ಯಾಬಿನೆಟ್ಟಿನಲ್ಲಿ ಕಾಣಿಸಿಕೊಂಡು, ಹತ್ತಿರಾಗೇ ಇರುವ ಬಯಕೆ ಮೂಡಿಕೊಂಡರೆ ಬಿಜೆಪಿ ಆಹ್ವಾನಕ್ಕೆ ಅಸ್ತು ಅಂದರೂ ಅಚ್ಚರಿಯೇನಿಲ್ಲ. ಅಂತೂ ಈ ಬಗೆಗಿನ ಗಂಭೀರ ಚರ್ಚೆ, ತಯಾರಿಗಳಂತೂ ಬಿಜೆಪಿ ಪಡಸಾಲೆಯಲ್ಲಿ ತೀವ್ರವಾಗಿಯೇ ನಡೆಯುತ್ತಿದೆ!