ಒಂದಿಡೀ ಚಿತ್ರರಂಗ ಪುರುಷ ಕೇಂದ್ರಿತ ವ್ಯವಸ್ಥೆಯಲ್ಲಿ ಬಂಧಿಯಾಗಿರುವಾಗಲೇ, ಮಾಸ್ ಹೀರೋಯಿನ್ ಆಗಿ ಸೈ ಅನ್ನಿಸಿಕೊಂಡವರು ಕನಸಿನ ರಾಣಿ (malashri) ಮಾಲಾಶ್ರೀ. ಹೆಣ್ಣುಮಕ್ಕಳನ್ನು ಒಂದು ಸೀಮಿತ ಪರಿಧಿಗೆ ಕಟ್ಟಿನಿಲ್ಲಿಸಿದ್ದ ಕಾಲಘಟ್ಟದಲ್ಲಿ ನಾಯಕಿಯಾಗೋದೇ ಒಂದು ಸಾಹಸ. ಅಂಥಾದ್ದರಲ್ಲಿ (mass) ಮಾಸ್ ಲುಕ್ಕಿನಲ್ಲಿ ಮಿಂಚೋದಿದೆಯಲ್ಲಾ? ಅದೇನು ಸಾಮಾನ್ಯದ ಸಂಗತಿಯಲ್ಲ. ನಿಜ, ಮಾಲಾಶ್ರೀ (malashri) ಯಶಸ್ಸಿನ ಪ್ರಭೆಯಲ್ಲಿ ಆಗಾಗ ಎಡವಿದ್ದಾರೆ. ಸೋಲಿನ ಕಹಿ ಉಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿಯಂತೂ ತೀರಾ ಆಪ್ತ ಜೀವವಾಗಿದ್ದ ಪತಿ (raamu) ರಾಮುವನ್ನು ಕಳೆದುಕೊಂಡ ಕಡು ದುಖಃಕ್ಕೀಡಾಗಿದ್ದಾರೆ. ಅದರ ನಡುವಲ್ಲಿಯೇ ಅತ್ತ ಮಗಳು ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾಳೆ. ಸಂಸಾರದ ನೊಗ ಹೊತ್ತ ಮಾಲಾಶ್ರೀ ಇನ್ನೇನು ನಟನೆಯಿಂದ ದೂರ ಸರಿದರು ಎಂಬ ಹೊತ್ತಿನಲ್ಲಿಯೆ, ಮಾಸ್ ಲುಕ್ಕಿನೊಂದಿಗೆ ಮರಳಿದ್ದಾರೆ!
ಬಹುಶಃ 2015ರಲ್ಲಿ ತೆರೆ ಕಂಡಿದ್ದ ಗಂಗಾ ಚಿತ್ರದ ನಂತರದಲ್ಲಿ ಮಾಲಾಶ್ರೀ (malashri) ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿಲ್ಲ. ಒಂದಷ್ಟು ಸಿನಿಮಾಗಳ ಅತಿಥ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರಷ್ಟೆ. ಆ ಬಳಿಕ ನಾಯಕಿಯಾಗಿ ಮಿಂಚುವ ಮನಸು ಮಾಡದ ಅವರೀಗ `ಮಾರಕಾಸ್ತ್ರ’ (maraksthra) ಎಂಬ ಸಿನಿಮಾದ ಮೂಲಕ ಅಬ್ಬರಿಸಲು ಅಣಿಯಾಗಿದ್ದಾರೆ. ಈ ಶೀರ್ಷಿಕೆಯೇ ಇದೊಂದು ಪಕ್ಕಾ ಮಾಸ್ ಕಂಟೆಂಟು ಹೊಂದಿರೋ ಚಿತ್ರವೆಂಬುದನ್ನು ಸಾರಿ ಹೇಳುತ್ತಿದೆ. ಇದರ ಬಗ್ಗೆ ಖುದ್ದು ಮಾಲಾಶ್ರೀ ಹಲವಾರು ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದಾರೆ. ಅದಕ್ಕೆ ಕಾರಣ ನಿರ್ದೇಶಕರ ಚಾತುರ್ಯ ಎಂಬುದು ಮಾಲಾಶ್ರೀ ಅಂಬೋಣ…
ಈ ಸಿನಿಮಾದ ನಿರ್ದೇಶಕರು ಗುರುಮೂರ್ತಿ ಸುನಾಮಿ. ವಿಶೇಷ ಚೇತನರಾಗಿದ್ದರೂ ಕೂಡಾ ಎಂಥವರೂ ನಾಚುವಂತೆ ಕ್ರಿಯಾಶೀಲಾಗಿರುವ ಅವರು ಹೇಳಿದ ಕಥೆ, ಮಾಲಾಶ್ರೀಯವರಿಗೆ ಒಂದೇ ಸಲಕ್ಕೆ ಹಿಡಿಸಿತ್ತಂತೆ. ನಂತರ ಕಡಿಮೆ ದಿನಗಳ ಕಾಲ ಚಿತ್ರೀಕರಣಕ್ಕೆ ಕಾಲ್ ಶೀಟ್ ಕೊಟ್ಟರೂ ಅರವತೈದು ದಿನಗಳ ಕಾಲ ಖುಷಿಯಾಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಂತೆ. ಕಾಶ್ಮೀರದಿಂದ ಕನ್ಯಾಕುಮಾರಿಯಗುಂಟ ಈ ಸಿನಿಮಾಕ್ಕಾಗಿ ಚಿತ್ರೀಕರಣ ನಡೆಸಲಾಗಿದೆ. ನಿರ್ಮಾಪಕ ನಟರಾಜ್ ನಟರಾಜ್ ಯಾವುದಕ್ಕೂ ಕಮ್ಮಿಯಿಲ್ಲದಂತೆ ಮಾರಕಾಸ್ತ್ರವನ್ನು ನಿರ್ಮಾಣ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಇಲ್ಲಿ ಕೈಂ ರಿಪೋಟರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಡಿದ್ದ ಟೀಸರ್ ಬಗೆಗೂ ಒಳ್ಳೆ ಮಾತುಗಳು ಕೇಳಿ ಬರುತ್ತಿವೆ.