ಕೃಷ್ಣೇಗೌಡ ನಿರ್ಮಾಣ ಮಾಡಿ, ನಿರ್ದೇಶಿಸಿರುವ `ನಾನು ಕುಸುಮ’ ಚಿತ್ರ ಇದೇ ಜೂನ್ 30ರಂದು ತೆರೆಗಾಣುತ್ತಿದೆ. ಒಂದು ಅಲೆಯ ಸಿನಿಮಾಗಳು ಸದ್ದು ಮಾಡುತ್ತಿರುವಾಗ, ಬೇರೊಂದು ಬಗೆ ರುಚಿ ಹತ್ತಿಸುವ ಸಿನಿಮಾಗಳು ರೂಪುಗೊಳ್ಳೋದೇ ಒಂದು ರೋಮಾಂಚಕ ಅನುಭೂತಿ. ಹಾಗಂತ, ಆ ಪ್ರಕ್ರಿಎ ಅಷ್ಟು ಸಲೀಸಿನದ್ದಲ್ಲ. ಅದಕ್ಕೆ ಪ್ರವಾಕೆ ವಿರುದ್ಧವಾಗಿ ಈಜುವ ಗಟ್ಟಿತನ ಬೇಕಾಗುತ್ತದೆ. ಸೋಲು ಗೆಲುವುಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ದಿಟ್ಟಿಸಿ ಸಾವರಿಸಿಕೊಳ್ಳುವ ವ್ಯವಧಾನವೂ ಬೇಕಾಗುತ್ತದೆ. ಅದೆಲ್ಲವನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಅವೆಲ್ಲವೂ ಒಟ್ಟೊಟ್ಟಿಗೆ ಏಕೀಭವಿಸಿದ ಕಾರಣದಿಂದಲೇ `ನಾನು ಕುಸುಮ’ ಎಂಬ ಭಿನ್ನ ಕಥಾನಕವೊಂದು ದೃಷ್ಯರೂಪ ಧರಿಸಿ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ!
ಈ ಚಿತ್ರ ಈಗಾಗಲೇ ಒಂದಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪ್ರರ್ದನಗೊಂಡು ಭರಪೂರ ಮೆಚ್ಚುಗೆಯನ್ನೂ ದಕ್ಕಿಸಿಕೊಂಡಿದೆ. ಹೀಗೆ ಪ್ರಶಸಿ ಪಡೆದ ಸಿನಿಮಾಗಳು ಬಹುತೇಕ ಅದರ ಪ್ರಭೆಯಲ್ಲಿಯೇ ಕಳೆದು ಹೋಗುತ್ತವೆ. ಅಂಥವುಗಳು ಪ್ರೇಕ್ಷಕರನ್ನು ತಲುಪಿಕೊಳ್ಳೋದು ವಿರಳ. ಆದರ ಕೃಷ್ಣೇಗೌಡರು ಈ ವಿಶಿಷ್ಟ ಸಿನಿಮಾವನ್ನು ಪ್ರೇಕ್ಷಕರಿಗೆ ಮುಟ್ಟಿಸುವ ಮನಸು ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಅವರ ಸಾಹಸವನ್ನು ಮೆಚ್ಚಲೇ ಬೇಕು. ವಿಶೇಷವೆಂದರೆ, ಈ ಸಿನಿಮಾವನ್ನು ನಿರ್ಮಾಣ ಮಾಡಿ, ನಿರ್ದೇಶಿಸೋದರ ಜೊತೆಗೆ, ಒಂದಿಡೀ ಕಥೆಯ ಆತ್ಮದಂತಿರುವ ಅಪರೂಪದ ಪಾತ್ರವೊಂದಕ್ಕೆ ಕೃಷ್ಣೇಗೌಡರು ಜೀವ ತುಂಬಿದ್ದಾರೆ.
ಇದು ಹಿರಿಯ ಕಥೆಗಾರರಾದ ಬೆಸಗರಹಳ್ಳಿ ರಾಮಣ್ಣನವರ ಸಣ್ಣ ಕಥೆಯೊಂದನ್ನು ಆಧರಿಸಿದ ಚಿತ್ರ. ಸಾಮಾಜಿಕ ಸೂಕ್ಷ್ಮಗಳನ್ನು ಒಳಗೊಂಡಿರುವ ಈ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡೇ ಕೃಷ್ಣೇಗೌಡರು ಅದಕ್ಕೆ ಸಿನಿಆ ಸ್ಪರ್ಶ ನೀಡಿದ್ದಾರೆ. ಹಾಗೆ, ಚಿತ್ರಕಥೆಯ ಕಾರ್ಯ ಆರಂಭವಾದಾಗ, ಮೂಲ ಕಥೆಗೆ ಪೂರಕವಾದ, ನೈಜ ಘಟನೆಯೊಂದರಿಂದ ಸ್ಫೂರ್ತಿ ಪಡೆದ ಭಾಗವೊಂದು ಸೇರ್ಪಡೆಗೊಂಡಿತ್ತು. ಹಾಗೆ ನಾನು ಕುಸುಮ ಕಥೆಯ ಹೊಸ್ತಿಲು ದಾಟಿ ಒಳ ಬಂದ ಪಾತ್ರ ಮಾರ್ಚುರಿಯಲ್ಲಿ ಹೆಣ ಕುಯ್ಯುವ ವ್ಯಕ್ತಿಯೊಬ್ಬನದ್ದು. ಆ ಪಾತ್ರದ ಸುತ್ತಲಿನ ಭಾವಕೋಶದೊಂದಿಗೆ ಈ ಕಥೆ ಮತ್ತಷ್ಟ ಸಮೃದ್ಧವಾಯಿತೆನ್ನಿಸಿದ ಕಾರಣದಿಂದಲೇ ಕೃಷ್ಣೇಗೌಡರು ಅದನ್ನಿಲ್ಲಿ ಅಳವಡಿಸಿಕೊಂಡಿದ್ದಾರೆ.
ಮೂಲತಃ ರಂಗಭೂಮಿ ನಟರಾಗಿರುವ ಕೃಷ್ಣೇಗೌಡರು ಅಪರೂಪದ ಪಾತ್ರಗಳ ತವಕದಲ್ಲಿರೋದರಿಂದ ಆ ಪಾತ್ರ ಅವರೊಳಗೊಂದು ಸಂಚಲನ ಮೂಡಿಸಿತ್ತು. ಆ ದೆಸೆಯಿಂದಲೇ ಆ ಪಾತ್ರವನ್ನು ತಾವೇ ನಿಭಾಯಿಸುವ ನಿರ್ಧಾರಕ್ಕೆ ಬಂದಿದ್ದರು. ಸಾಮಾನ್ಯವಾಗಿ ಹೆಣ ಕುಯ್ಯುವ ಕೆಲಸವೇ ಮುಖ್ಯವಾಹಿನಿಯ ಮನಸುಗಳಲ್ಲಿ ವಿಕ್ಷಿಪ್ತ ಭಾವ ಮೂಡಿಸುತ್ತೆ. ಸುತ್ತ ಬದುಕುವ ಜೀವಗಳು ಇನ್ನಿಲ್ಲವಾದಾಗ, ಕಳೇಬರವನ್ನೂ ಕೂಡಾ ಜತನದಿಂದ ನೋಡಿಕೊಳ್ಳುವ ಸೂಕ್ಷ್ಮ ಮನಸ್ಥಿತಿ ನಮ್ಮದು. ಅಂತಾದ್ದರಲ್ಲಿ ತನಿಖೆ, ವೈದ್ಯಕೀಯ ಪ್ರಕ್ರಿಯೆಯ ಭಾಗವಾಗಿ ಹೆಣ ಕುಯ್ಯವ ಕೆಲಸ ವ್ಯಕ್ತಿಯೊಬ್ಬನಲ್ಲಿ ಎಂಥಾ ಭಾವ ಮೂಡಿಸಬಹುದೆಂಬುದು ಅಂದಾಜಿಗೆ ನಿಲುಕುವಂಥಾದ್ದಲ್ಲ.
ಹೀಗೆ ಮಾರ್ಚುರಿ ಮಾಡೋ ವ್ಯಕ್ತಿಗಳ ಬಗ್ಗೆ ನಾನಾ ಕಥೆಗಳಿವೆ. ಬೇರಾರದ್ದೋ ದೇಹ ಕುಯ್ಯಲೇ ಕಸಿವಿಸಿಗೊಳ್ಳುವಾಗ, ಹೆತ್ತ ಮಕ್ಕಳ ಕಳೇಬರವೇ ಮಾರ್ಚುರಿಯಲ್ಲಿ ಮಲಗಿದರೆ ಹೇಆಗಬೇಡ? ಊಹಿಸೋದಕ್ಕೂ ನಡುಕ ಮೂಡಿಸುವ ಅಂಥಾದ್ದೊಂದು ಭಯಾನಕ ಕಥನ ಈ ಸಿನಿಮಾದಲ್ಲಿದೆ. ಸಾಕಷ್ಟು ತಯಾರಿ ನಡೆಸಿಯೇ ಕೃಷ್ಣೇಗೌಡರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ ಖುಷಿಯಲ್ಲಿದ್ದಾರೆ. ನಮ್ಮ ಸಮಾಜದಲ್ಲಿ ನಡೆಯುತ್ತಿದ್ದರೂ, ನಾವ್ಯಾರೂ ಅಷ್ಟಾಗಿ ತಲೆ ಕೆಡಿಸಸಿಕೊಳ್ಳದ, ಆಗಾಗ ಸುದ್ದಿಯಾಗಿ ನಮ್ಮೆದುರು ನಿಲ್ಲುವ ಘಟನಾವಳಿಗಳ ಆಂತರ್ಯದ ಅಸಲೀ ಸತ್ಯ ಅಡಕವಾಗಿರುವ ಚಿತ್ರ ನಾನು ಕುಸುಮ. ಇದೇ ಜೂನ್ 30ರಂದು ಅದು ನಿಮ್ಮೆದುರು ಬರಲಿದೆ…