ಈಗಂತೂ ಪ್ರಾದೇಶಿಕ ಭಾಷೆಗಳ ಸಿನಿಮಾಗಳೇ ಬಾಲಿವುಡ್ (bollywood) ಮಂದಿಯ ಎದೆ ಅದುರುವಂತೆ ಸದ್ದು ಮಾಡುತ್ತಿವೆ. ಒಂದು ಕಾಲಕ್ಕೆ ಬೇರೆ ಭಾಷೆಗಳ ಸಿನಿಮಾಗಳನ್ನು ಹೀಗಳೆದು ಮೆರೆಯುತ್ತಿದ್ದವರೇ, ಇಂದು ಅಂಥಾ ಭಾಷೆಗಳ ಸಿನಿಮಾಗಳ ಮುಂದೆ ಮಂಡಿಯೂರಬೇಕಾಗಿ ಬಂದಿದೆ. ಕನ್ನಡದ (kannada films) ಸಿನಿಮಾಗಳು ಬಾಲಿವುಡ್ (bollywood) ಅನ್ನೂ ಮೀರಿ ಮಿಂಚುತ್ತಿರುವ ಈ ಹೊತ್ತಿನಲ್ಲಿ, ಬಾಲಿವುಡ್‍ಗೆ ಅಕ್ಷರಶಃ ಮಂಕು ಕವಿದಂತಾಗಿ ಬಿಟ್ಟಿದೆ. ಬಹು ಕೋಟಿ ಮೊತ್ತದಲ್ಲಿ ತಯಾರಾಗಿ, ಭಯಂಕರ ಹೈಪಿನೊಂದಿಗೆ ಬಿಡುಗಡೆಗೊಂಡಿರುವ ಆದಿಪುರುಷ್ (adipurush) ಚಿತ್ರದ ಹೀನಾಯ ಸೋಲಿನ ಮೂಲಕ ಆ ಮಂಕು ವಾತಾವರಣ ಅನೂಚಾನವಾಗಿ ಮುಂದುವರೆದಿದೆ!
ಒಂದು ವೇಳೆ ಅದ್ಭುತವಾಗಿ ರೂಪುಗೊಂಡಿದ್ದಿದ್ದರೆ, ಮಹಾ ಗೆಲುವನ್ನು ತನ್ನದಾಗಿಸಿಕೊಳ್ಳಬಹುದಾದ ಎಲ್ಲ ಅವಕಾಶಗಳೂ ಆದಿಪುರುಷ್ (adipurush) ಚಿತ್ರಕ್ಕಿತ್ತು. ಕೊಂಚ ಎಚ್ಚರ ವಹಿಸಿದ್ದರೂ ಇಂಥಾದ್ದೊಂದು ಸರಣಿ ಸೋಲಿನ ಕಹಿಯನ್ನು ಮೀರಿಕೊಳ್ಳುವ ದಾರಿ ಪ್ರಭಾಸ್ (prabhas) ಮುಂದಿತ್ತು. ಆದರೆ, ಒಂದಷ್ಟು ಮೈ ಮರೆವು ಮತ್ತು ಹುಚ್ಚುತನಗಳೆಲ್ಲವೂ ಸೇರಿಕೊಂಡು ಆದಿಪುರುಷನಿಗೆ ಪಕ್ಕಾ ಕಾಮಿಡಿ ಸ್ಪರ್ಶ ಸಿಕ್ಕಂತಾಗಿದೆ. ಟ್ರೋಲ್ ಮಾಡಲು ಯಾವ ಸರಕು ಸಿಗುತ್ತದೆಂದು ಸದಾ ತಲೆ ಕೆರೆದುಕೊಂಡು ಕೂರೋ ರೋಲ್ ಮಂದಿಗೆ ಭರ್ಜರಿ ಹಾರ ಒದಗಿಸಿದ್ದಷ್ಟೇ ಆದಿಪುರುಷನ ಮಹಾನ್ ಸಾಧನೆ!
ಮೊದಲ ದಿನವೇ ಆದಿಪುರುಷ್ ನೂರಾ ಐವತ್ತು ಕೋಟಿಗೂ ಹೆಚ್ಚು ಕಾಸು ಬಾಚಿಕೊಂಡಿದೆ ಅಂತೆಲ್ಲ ಸುದ್ದಿಯಾಗುತ್ತಿದೆ. ಅದರಲ್ಲಿ ನಿಜವೂ ಇದೆ. ಅದು ಪ್ರಭಾಸ್‍ಗಿರುವ ಕ್ರೇಜ್ ಮತ್ತಗು ಅಭಿಮಾನಿ ಬಳಗ ಆತನ ಮೇಲಿಟ್ಟಿರುವ ನಂಬಿಕೆಯ ಬಾಬತ್ತು. ಈ ಹಿಂದೆ ಟ್ರೈಲರ್ ಲಾಂಚ್ ಆದಾಗಲೇ ಇದು ಬರಖತ್ತಾಗೋ ಸರಕಲ್ಲ ಎಂಬುದು ಸ್ಪಷ್ಟವಾಗಿತ್ತು. ಅಷ್ಟಿದ್ದರೂ ಕೂಡಾ ಪ್ರಭಾಸ್ ಅಭಿಮಾನಿಗಳು ಮುಗಿಬಿದ್ದು ನೋಡಿದ ಪರಿಣಾಮವಾಗಿಯೇ ಆದಿಪುರುಷನ ಜೋ:ಳಿಗೆ ತಕ್ಕ ಮಟ್ಟಿಗೆ ತುಂಬಿದೆ. ಆದರೆ, ಆ ಕ್ರೇಜ್ ಜರ್ರನರೆ ಇಳಿದು ಹೋಗಿದೆ. ಇನ್ನೇನು ಇನದೊಪ್ಪತ್ತಿನಲ್ಲಿಯೇ ಸಿನಿಮಾ ಮಂದಿರಗಳು ಖಾಲಿ ಹೆಡೆದು, ಶೋಗಳು ಕ್ಯಾನ್ಸಲ್ ಆಗೋದು ಗ್ಯಾರೆಂಟಿ ಎಂಬಂಥಾ ವಾತಾವರಣವಿದೆ.
ಓಂ ರಾವುತ್ ಎಂಬ ಹುಚ್ಚು ಆಸಾಮಿ ಮನಬಂದಂತೆ ದೃಷ್ಯ ಕಟ್ಟಿ, ರಾಮಾಯಣದ ಪಾತ್ರಗಳನ್ನು ಭಿನ್ನವಾಗಿ ತೋರಿಸುವ ಆಕಾಂಕ್ಷೆಯೊಂದಿಗೆ, ಹುಚ್ಚುತನ ಮೆರೆದಿದ್ದಾನೆ. ಅದರ ಫಲವಾಗಿ, ಈ ನೆಲದ ಜನಮಾನಸದಲ್ಲಿ ಪಡಿಮೂಡಿಕೊಂಡಿರುವ ರಾಮಾಯಣದ ಪಾತ್ರಗಳೆಲ್ಲ ಚಿತ್ರವಿಚಿತ್ರವಾಗಿ ತೆರೆ ಮೇಲೆ ಕಾಣಿಸಿಕೊಂಡಿವೆ. ಜನ ಅಭಿಮಾನ, ಪಥಗಳ ಬೇಧ ಮರೆತು ಒಕ್ಕೊರಲಿನಿಂದ ಓಂ ರಾವುತನ ಜನ್ಮ ಜಾಲಾಡುತ್ತಿದ್ದಾರೆ. ರಾಮಾಯಣ, ಮಹಾಭಾರತದಂಥಾ ಮಹಾ ಕಾವ್ಯಗಳು ಸಿನಿಮಾ ಚೌಕಟ್ಟಿಗೆ ಆಗಾಗ ಒಗ್ಗಿಕೊಳ್ಳುತ್ತವೆ. ನಮ್ಮದೇ ಮುನಿರತ್ನ ಸಾಹೇಬರು ತಮ್ಮದೇ ಧಾಟಿಯಲ್ಲೊಂದು ಕುರುಕ್ಷೇತ್ರ ಸೃಷ್ಟಿಸಿದ್ದು ನಿಮಗೆ ನೆನಪಿರಬಹುದು. ಆದರೆ, ಅದರಲ್ಲಿ ಓಂ ರಾವುತನಷ್ಟು ಪರಿಣಾಮಕಾರಿಯಾಗಿ ಕಾಮಿಡಿ ಮಾಡಲು ಸಾಧ್ಯವಾಗಿರಲಿಲ್ಲ. ಆ ವಿಚಾರದಲ್ಲಿ ರಾವುತ್ ಈ ವರೆಗಿನ ಎಲ್ಲ ಕಳಪೆ ದಾಖಲೆಗಳನ್ನೂ ಮುರಿದು ಮುನ್ನುಗ್ಗಿದ್ದಾನೆ. ಆದರೆ, ಆದಿಪುರುಷ ಮಾತ್ರ ಸಿನಿಮಾ ಮಂದಿರಗಳಲ್ಲಿ ನೆಲೆನಿಲ್ಲಲಾರದೆ ಪರ್ಮನೆಂಟಾಗಿ ಹೊರದಬ್ಬಿಸಿಕೊಳ್ಳುವ ಭಯದಿಂದ ಕಂಗಾಲಾಗಿದ್ದಾನೆ!