ಸಿಕ್ಕ ಪಾತ್ರಗಳನ್ನು ಒಳಗಿಳಿಸಿಕೊಂಡು ನಟಿಸುತ್ತಾ, ತಾನೋರ್ವ ವಿಶಿಷ್ಟ ನಟ ಎಂಬುದನ್ನು ಋಜುವಾತು ಪಡಿಸಿಕೊಂಡಿರುವವರು (gultu aveen) ಗುಳ್ಟು ನವೀನ್. ಇತ್ತೀಚೆಗೆ ತೆರೆ ಕಂಡಿದ್ದ ಒಂದಷ್ಟು ಸಿನಿಮಾಗಳಲ್ಲಿ ವಿಲನ್ ಆಗಿಯೂ ಸೈ ಅನ್ನಿಸಿಕೊಂಡಿದ್ದ ನವೀನ್, (naveen) ಇದೀಗ ಮತ್ತೆ ನೈಜ ಕಥಾನಕವೊಂದರ ನಾಯಕನಾಗಿ ನಟಿಸಿದ್ದಾರೆ. ಮಾತಲ್ಲಿ ಸದ್ದು ಮಾಡದೆ, ನಟನೆಯ ಮೂಲಕವೇ ಎಲ್ಲರನ್ನೂ ಸೆಳೆಯುತ್ತಿರುವ ಈತ, ಕ್ಷೇತ್ರಪತಿ ಎಂಬ ಸಿನಿಮಾ ಮೂಲಕ ಮತ್ತೊಂದು ಮಜಲಿನ ಗೆಲುವು ದಕ್ಕಿಸಿಕೊಳುವ ಲಕ್ಷಣಗಳು ಢಾಳಾಗಿ ಕಾಣಿಸಲಾರಂಭಿಸಿವೆ. ನವೀನ್ ನಾಯಕನಾಗಿ ನಟಿಸಿರೋ (kshetrapathi) ಕ್ಷೇತ್ರಪತಿ, ಆರಂಭದಿಂದಲೂ ಸದ್ದು ಮಾಡುತ್ತಾ ಬಂದಿತ್ತು. ಇದೀಗ ಆ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಅದನ್ನು ಕಂಡವರೊಳಗೆ ಪ್ರವಹಿಸುತ್ತಿರುವ ರೋಮಾಂಚನ, ಆ ದಿಕ್ಕಿನಿಂದ ತೂರಿ ಬರುತ್ತಿರುವ ಪ್ರತಿಕ್ರಿಯೆಗಳೇ ಕ್ಷೇತ್ರಪತಿ ದೊಡ್ಡ ಗೆಲುವೊಂದರ ಅಧಿಪತಿಯಾಗೋ ಭರವಸೆಯನ್ನು ಗಟ್ಟಿಗೊಳಿಸುವಂತಿದೆ.
ನಿಜವಾದ ನಟನನ್ನು ಭಿನ್ನ ಕಥಾನಕಗಳೇ ಹುಡುಕಿ ಬರೋದರಲ್ಲೇನೂ ಅಚ್ಚರಿಯಿಲ್ಲ. ಅದು ನವೀನ್ (naveen) ವಿಚಾರದಲ್ಲಿಯೂ ಅಕ್ಷರಶಃ ನಿಜವಾಗಿದೆ. ಇತ್ತೀಚೆಗೆ ತೆರೆ ಕಂಡಿದ್ದ ಹೊಯ್ಸಳ ಚಿತ್ರದಲ್ಲಿ ಬಲಿ ಎಂಬ ಪಾತ್ರದಲ್ಲಿ ಮಿಂಚಿದ್ದ ನವೀನ್, ಕ್ಷೇತ್ರಪತಿಯ ಮೂಲಕ ರೈತಾಪಿ ವರ್ಗದ ಕುದಿರಕ್ತದ ಯುವಕನಾಗಿ ಅಬ್ಬರಿಸಿದ್ದಾರೆ. ಇದೀಗ ಬಿಡುಗಡೆಗೊಂಡಿರುವ ಟೀಸರ್‍ನಲ್ಲಿ ಅದರದ್ದೊಂದಿಷ್ಟು ಝಲಕ್ಕುಗಳು ಜಾಹೀರಾಗಿವೆ. ವಿಶೇಷವೆಂದರೆ, ಈ ಸಿನಿಮಾ ಮೂಲಕ ಈ ನೆಲದ ಘಮಲಿನ ಕಥೆÉಯೊಂದನ್ನು ದೃಷ್ಯರೂಪಕ್ಕಿಳಿಸಲಾಗಿದೆ. ಅನ್ನದಾತನ ಒಡಲ ಸಂಕಟವನ್ನು ಪರಿಣಾಮಕಾರಿಯಾಗಿ ಮುಖ್ಯವಾಹಿನಿಗೆ ತಲುಪಿಸುವ ಪ್ರಯತ್ನವಾಗಿಯೂ ಈ ಸಿನಿಮಾ ಗಮನ ಸೆಳೆಯುತ್ತಿದೆ.
ಇದು ನೈಜ ಘಟನೆಯಾಧಾರಿತ ಚಿತ್ರ. ಉತ್ತರ ಕರ್ನಾಟಕದಲ್ಲಿ ಬಹು ವರ್ಷಗಳ ಹಿಂದೆ ರಸ ಗೊಬ್ಬರ ಕೇಳಿದ ರೈತರೆದೆಗೆ ಗುಂಡಿಟ್ಟ ಘಟನೆಯೊಂದು ನಡೆದಿತ್ತು. ಅಂಥಾದ್ದೇ ರೌರವ ಘಟನಾವಳಿಯೊಂದನ್ನು ಕ್ಷೇತ್ರಪತಿ ಚಿಒತ್ರದ ಮೂಲಕ ದೃಷ್ಯಕ್ಕೆ ಒಗ್ಗಿಸಲಾಗಿದೆ. ಒಂದೇ ಸಲಕ್ಕೆ ರಾ ಫೀಲ್ ಕೊಡುವ ದೃಷ್ಯಗಳಿಂದ ತುಂಬಿರುವ ಈ ಸಿನಿಮಾದಲ್ಲಿ ನವೀನ್ ಮುಗ್ಧತೆ ಮತ್ತು ವ್ಯವಸ್ಥೆಗೆ ಸೆಡ್ಡು ಹೊಡೆದು ನಿಲ್ಲುವ ರೈತಾಪಿ ಹುಡುಗನ ಪಾತ್ರದಲ್ಲಿ ಕಂಗೊಳಿಸಿದ್ದಾರೆ. ಈ ಬಗ್ಗೆ ಅಷ್ಟದಿಕ್ಕುಗಳಿಂದಲೂ ಮೆಚ್ಚುಗೆಗಳು ಕೇಳಿ ಬರಲಾರಂಭಿಸಿವೆ. ಇದೀಗ ಬಿಡುಗಡೆಗೆ ಸನ್ನದ್ಧವಾಗಿ ನಿಂತಿರುವ ಕೇತ್ರಪತಿ, ಟೀಸರ್ ಮೂಲಕ ಕುತೂಹಲ ಕುದಿಯುವಂತೆ ಮಾಡಿರೋದಂತೂ ಸತ್ಯ!