ಮನಸು ವಿಹ್ವಲಗೊಂಡಾಗ, ನಂಬಿಕೆಗಳ ಪಕ್ಕೆಗೆ ಮೋಸದ ಈಟಿ ಚುಟ್ಟಿದಾಗ, ಒಂದು ನೀರವ ಮೌನ ಎದೆತಬ್ಬಿದಾಗೆಲ್ಲ ಬಹುತೇಕರ ಮನಸು `ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು’ ಎಂಬ ಕವಿತೆಯ ಸಾಲುಗಳ ತೆಕ್ಕೆಗೆ ಬೀಳುತ್ತೆ. ಅದು ಕವಿ ಗೋಪಾಲ ಕೃಷ್ಣ ಅಡಿಗರು (gopala krishna adiga) ಸೃಷ್ಟಿಸಿದ್ದ ಸಾರ್ವಕಾಲಿಕ ಅದ್ಭುತ ರಚನೆ. ಇದೀಗ ಎಲ್ಲರನ್ನೂ ಕಾಡುವ ಆ ಕವಿತೆ ಸಾಲುಗಳೇ ಸಿನಿಮಾವಾಗಿದೆ. ಯಾವ ಸದ್ದೂ ಇಲ್ಲದೆ ಚಿತ್ರೀಕರಣ ಉಗಿಸಿಕೊಂಡಿರುವ ವಿಶ್ವಾಸ್ ಕೃಷ್ಣ (vishvas kishna) ನಿರ್ದೇಶನದ `ಯಾವ ಮೋಹನ ಮುರಳಿ ಕರೆಯಿತು’ (yava mohana murali kareyitho) ಚಿತ್ರದ ಟೀಸರ್ ಈಗ ಬಿಡುಗಡೆಗೊಂಡಿದೆ. ನಾನಾ ದಿಕ್ಕಿನತ್ತ ಆಲೋಚನೆಗಳನ್ನು ಕೊಂಡೊಯ್ಯುವ, ಭಾವ ಪರವಶಗೊಳಿಸುವ ಕಂಟೆಂಟಿನ ಸುಳಿವಿನೊಂದಿಗೆ ಈ ಟೀಸರ್ ಎಲ್ಲರನ್ನೂ ಹಿಡಿದಿಟ್ಟುಕೊಂಡಿದೆ.
ಶರಣಪ್ಪ ಗೌರಮ್ಮ (sharanappa gowramma) ನಿರ್ಮಾಣ ಮಾಡಿರುವ ಈ ಚಿತ್ರದ ಟೀಸರ್ ಒಂದೇ ಸಲಕ್ಕೆ ಎಲ್ಲ ಅಭಿರುಚಿಯ ಪ್ರೇಕ್ಷಕರನ್ನೂ ಸೆಳೆಯುವಂತಿರೋದಂತೂ ನಿಜ. ಇದೀಗ ಕನ್ನಡ ಚಿತ್ರರಂಗದಲ್ಲಿ ಹೊಸಾ ಬಗೆಯ ಕಥೆಗಳು ಹುಟ್ಟು ಪಡೆಯುತ್ತಿವೆ. ಚರ್ವಿತಚರ್ವಣ ಸಿದ್ಧಸೂತ್ರಗಳಾಚೆ ಹೊರಳಿಕೊಳೋದೇ ಸಿನಿಮಾ ರೂಪಿಸುವ ಮೊದಲ ಹೆಜ್ಜೆ ಎಂಬಂಥಾ ಮನಃಸ್ಥಿತಿ ರೂಢಿಯಾಗುತ್ತಿದೆ. ಅದರ ಮುಂದುವರೆದ ಭಾಗದಂತೆ ಮೂಡಿ ಬಂದಿರುವ ಚಿತ್ರವಿದು. ಒಂದು ವಿಕಲ ಚೇತನ ಮಗು, ಅದರ ಸುತ್ತ ಹಬ್ಬಿಕೊಳ್ಳುವ ಪಾತ್ರಗಳು ಮತ್ತು ಶ್ವಾನವೊಂದರ ಇರುವಿಕೆಯಲ್ಲಿ ಈ ಟೀಸರ್ ಮೂಡಿ ಬಂದಿದೆ.
ಒಂದು ವೇಳೆ ಈ ಟೀಸರ್ನಲ್ಲಿರುವಂಥಾದ್ದೇ ತೀವ್ರತೆಯಿಂದ ಒಂದಿಡೀ ಸಿನಿಮಾ ಮೂಡಿ ಬಂದಿದ್ದರೆ ಮೋಹನ ಮುರಳಿಗೆ ಸಮ್ಮೋಹಕ ಯಶ ದಕ್ಕೋದರಲ್ಲಿ ಯಾವ ಸಂದೇಹವೂ ಇಲ್ಲ. ವಿಶೇಷವೆಂದರೆ, ಕಡಲ ತೀರದ ಭಾರ್ಗವ ಚಿತ್ರದ ಮೂಲಕ ಬಹುವಾಗಿ ಮೆಚ್ಚುಗೆ ಗಳಿಸಿಕೊಂಡಿದ್ದ ಪಟೇಲ್ ವರುಣ್ ರಾಜ್ (patel varun aj) ಇಲ್ಲಲಿ ಬಹುಮುಖ್ಯವಾದ ಪಾತ್ರವಂದರಲ್ಲಿ ಕಾಣಿಸಿಕೊಂಡಿದ್ದರೆ. ಆ ಪಾತ್ರ ಕೂಡಾ ಈ ಟೀಸರ್ನಲ್ಲಿ ಪ್ರಧಾನವಾಗಿ ಗಮನ ಸೆಳೆದಿದೆ. ಪಟೇಲ್ ವರುಣ್ ರಾಜು, ಬೇಬಿ ಪ್ರಕೃತಿ, ಮಾಧವ, ಸ್ವಪ್ನಾ ಶೆಟ್ಟಿಗಾರ್, ರಾಕಿ, ಶಶಿಧರ ಭಟ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಕೀರ್ತನ್ ಪೂಜಾರಿ ಛಾಯಾಗ್ರಹಣ, ಅನಿಲ್ ಸಿ.ಜೆ ಸಂಗೀತ ನಿರ್ದೇಶನ, ಶ್ರೀನಿವಾಸ್ ಕಲಾಲ್ ಸಂಕಲನ, ಪ್ರೇಮ್ ಮತ್ತು ಚೇತನ್ ಸ್ಥಿರ ಚಿತ್ರ ಛಾಯಾಗ್ರಹಣದೊಂದಿಗೆ ಈ ಸಿನಿಮಾ ಮೈದುಂಬಿಕೊಂಡಿದೆ.