ಕನ್ನಡ ಚಿತ್ರರಂಗದ ಭಿನ್ನ ಅಭಿರುಚಿಯ ನಿರ್ದೇಶಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು9rishbh shetty) ರಿಷಭ್ ಶೆಟ್ಟಿ. ಕಾಂತಾರ (kanthara) ಚಿತ್ರದ ನಂತರವಂತೂ ರಿಷಭ್‍ರ ಪ್ರಭೆ ದೇಶಾದ್ಯಂತ ಹಬ್ಬಿಕೊಂಡಿದೆ. ಈ ಸಮ್ಮೋಹಕ ಗೆಲುವಿನ ನಂತರದಲ್ಲಿ ರಿಷಭ್ ಏನು ಮಾಡುತ್ತಿದ್ದಾರೆ? ಅವರ ಕಾರ್ಯವೈಖರಿ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳು ಪ್ರೇಕ್ಷಕ ವಲಯದಲ್ಲಿದೆ. ಸದ್ಯದವರೆಗೆ ಅದಕ್ಕುತ್ತರವಾಗಿ ಎದುರಾಗುತ್ತಿದ್ದದ್ದು (kanthara2) ಕಾಂತಾರ 2ಗಾಗಿನ ತಯಾರಿಯ ವಿಚಾರ. ಅದರಲ್ಲಿ ನಿಜವೂ ಇದೆ. ರಿಷಭ್ ಇದೀಗ ಆ ಕೆಲಸದಲ್ಲಿ ಬ್ಯುಸಿಯಾಗಿದ್ದರೂ ಕೂಡಾ, ಅದೇ ಹೊತ್ತಿನಲ್ಲಿ ನಿರ್ಮಾಪಕರಾಗಿಯೂ ಬಹಳಾ ಬ್ಯುಸಿಯಾಗಿಬಿಟ್ಟಿದ್ದಾರೆ. ಅವರ ಸಂಸ್ಥೆಯ ಕಡೆಯಿಂದ ನಿರ್ಮಾಣಗೊಂಡಿರುವ ಒಂದಷ್ಟು ಸಿನಿಮಾಗಳೀಗ ಚಿತ್ರೀಕರಣ ಮುಗಿಸಿಕೊಂಡಿವೆ!
ಇತ್ತೀಚೆಗಷ್ಟೇ ರಿಷಭ್ ನಿರ್ಮಾಣದ `ಲಾಫಿಂಗ್ ಬುದ್ಧ’ ಎಂಬ ಚಿತ್ರ ಶುಭಾರಂಭಗೊಂಡಿತ್ತು. ಪಕ್ಕಾ ಕಂಟೆಂಟ್ ಓರಿಯಂಟೆಡ್ ಆಗಿರೋ ಈ ಸಿನಿಮಾದ್ಲಿ ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆಂಬ ಸುದ್ದಿಯೂ ಹೊರಬಿದ್ದಿತ್ತು. ಆ ಸಿನಿಮಾ ಬಗೆರಗಿನ ಕುತೂಹಲವಿನ್ನೂ ಚಾಲ್ತಿಯಲ್ಲಿರುವಾಗಲೇ `ವಾಘಚಿಪಾಣಿ’ ಅಂತೊಂದು ಸಿನಿಮಾ ಸುದ್ದಿ ಕೇಂದ್ರದಲ್ಲಿದೆ. ಶೀರ್ಷಿಕೆಯಲ್ಲಿಯೇ ಗಾಢ ಕೌತುಕವನ್ನು ಬಚ್ಚಿಟ್ಟುಕೊಂಡಂತಿರುವ ಈ ಸಿನಿಮಾವೀಗ ಚಿತ್ರೀಕರಣ ಮುಗಿಸಿಕೊಂಡಿದೆ. ಯಾವ ಸದ್ದುಗದ್ದಲವೂ ಇಲ್ಲದೆ ಚಿತ್ರೀಕರಣ ಸಮಾಪ್ತಿ ಮಾಡಿಕೊಂಡಿರುವ ಸದರಿ ಸಿನಿಮಾ ಬಗೆಗೀಗ ಪ್ರೇಕ್ಷಕ ವಲಯದಲ್ಲೊಂದು ಕ್ಯೂರಿಯಾಸಿಟಿ ಮಡುಗಟ್ಟಿಕೊಂಡಿದೆ.
ವಾಘಚಿಪಾಣಿಯನ್ನು ನಟೇಶ್ ಹೆಗ್ಡೆ ನಿರ್ದಶನ ಮಾಡಿದ್ದಾರೆ. ಶಿರಸಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಅವ್ಯಾಹತವಾಗಿ ಮೂವತೈದು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಆದರೆ, ಚಿತ್ರೀಕರಣ ಮುಗಿದ ಖುಷಿಯನ್ನಷ್ಟೇ ಹಂಚಿಕೊಂಡಿರುವ ಚಿತ್ರತಂಡ, ಕಥೆ ಮೊದಲಾದ ಮುಖ್ಯ ವಿಚಾರಗಳ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟು ಕೊಡದಂತೆ ಗೌಪ್ಯತೆ ಕಾಯ್ದುಕೊಂಡಿದೆ. ಅಂತೂ ರಿಷಭ್ ನಿರ್ದೇಶನದ ಜೊತೆಗೆ, ನಟನಾಗಿಯೂ ಮಿಂಚುತ್ತಾ, ನಿರ್ಮಾಪಕನಾಗಿಯೂ ಪ್ರಜ್ವಲಿಸುತ್ತಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಮೂಲಕ ನಿರ್ಮಾಣ ಆರಂಭಿಸಿದ್ದ ರಿಷಭ್, ಆ ನಂತರದಲ್ಲಿ ಕಥಾ ಸಂಗಮ, ಹೀರೋ, ಪೆದ್ರೋ ಮುಂತಾದ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಒಟ್ಟಾರೆಯಾಗಿ ರಿಷಭ್ ನಿರ್ಮಾಪಕರಾಗಿಯೂ ಕ್ರಿಯಾಶೀಲ ಸಿನಿಮಾಗಳತ್ತ ಹೆಚ್ಚು ಫೋಕಸ್ ಮಾಡುತ್ತಿರೋದಂತೂ ಸತ್ಯ!