ಒಂದು ಪ್ರಸಿದ್ಧ ಅಲೆಯೆದ್ದಾಗ ಎಲ್ಲರೂ ಅದರ ಹಿಂದೆ ಹೋಗಿ, ಬಹುತೇಕರು ಅದನ್ನೇ ಕನಸಾಗಿಸಿಕೊಳ್ಳುವುದು ಚಿತ್ರರಂಗದಲ್ಲಿ ಮಾಮೂಲು. ಇದೀಗ ಅದರ ಭಾಗವಾಗಿಯೇ ಪ್ಯಾನಿಂಡಿಯಾ (pan india movies) ಸಿನಿಮಾಗಳ ಭರಾಟೆ ಜೋರಾಗಿದೆ. ಆ ಬಗೆಯ ಸಿನಿಮಾಗಳು ಮಾತ್ರವೇ ಕನ್ನಡ ಚಿತ್ರರಂಗದ ಘನತೆಯನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯಬಲ್ಲವು, ಅಂಥಾ ಸಿನಿಮಾ ಮಾಡಿ ಜೈಸಿಕೊಂಡರೆ ಮಾತ್ರವೇ ಉಳಿಗಾಲ ಎಂಬಂಥಾ ಭಾವನೆಯೂ ಬಹುತೇಕರಲ್ಲಿದೆ. ಆದರೆ, ದೊಡ್ಡದೋ ಚಿಕ್ಕದೋ; ಪ್ರಯೋಗಾತ್ಮಕ ಗುಣಗಳು ಮಾತ್ರವೇ ಚಿತ್ರರಂಗದ ಜೀವಂತಿಕೆಯನ್ನು ಕಾಪಿಟ್ಟುಕೊಳ್ಳಬಲ್ಲುದೆಂಬುದು ಸಾರ್ವಕಾಲಿಕ ಸತ್ಯ. ಅಂಥಾದ್ದೊಂದು ಜೀವಂತಿಕೆಯನ್ನು ಮತ್ತಷ್ಟು ನಳನಳಿಸುವಂತೆ ಮಾಡುವಲ್ಲಿ ಇತ್ತೀಚಿನನ ದಿನಮಾನದಲ್ಲಿ ಪ್ರಧಾನವಾಗಿ ಪಾತ್ರವಹಿಸಿರುವ ಚಿತ್ರ (pinki elli) `ಪಿಂಕಿ ಎಲ್ಲಿ?’.
ಪೃಥ್ವಿ ಕೋಣನೂರು (pruthvi konanur) ನಿರ್ದೇಶನ ಮಾಡಿ, ಅಕ್ಷತಾ ಪಾಂಡವಪುರ (akshatha pandavapura) ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ `ಪಿಂಕಿ ಎಲ್ಲಿ’. ಈಗಾಗಲೇ ಈ ಚಿತ್ರದ ಅಸಲೀ ಕಸುವೇನೆಂಬುದು ವಿಶ್ವ ಮಟ್ಟದಲ್ಲಿ ಜಾಹೀರಾಗಿದೆ. ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುವ ಮೂಲಕ ಪ್ರಶಸ್ತ್ತಿಗಳನ್ನೂ ತನ್ನದಾಗಿಸಿಕೊಂಡಿದೆ. ಇದೆಲ್ಲವೂ ಸಾಧ್ಯವಾಗಿದ್ದರ ಹಿಂದೆ ಹಲವ ಶ್ರಮವಿದೆ. ಪ್ರತಿಭೆಯಿದೆ. ಆದರೆ ಅದೆಲ್ಲವನ್ನೂ ಪೊರೆದ ಅಸಲೀ ಶಕ್ತಿಯಂತಿರುವವರು ನಿರ್ಮಾಪಕರಾದ (krishne gowda) ಕೃಷ್ಣೇಗೌಡರು. ಈವತ್ತಿಗೆ ಚಿತ್ರರಂಗ ಮಗ್ಗುಲು ಬದಲಿಸಿರುವ ರೀತಿ, ಅದರೊಳಗೆ ಗಿಜಿಗುಡುತ್ತಿರವ ವ್ಯಾವಹಾರಿಕ ಪ್ರಜ್ಞೆಯನ್ನು ಬಲ್ಲವರೆಲ್ಲರೂ ನಿಸ್ಸಂದೇಹಾಗಿಯೂ ಕೃಷ್ಣೇಗೌಡರ ಸಾಹಸವನ್ನು ಮೆಚ್ಚಿಕೊಳ್ಳದಿರುವುದಿಲ್ಲ. ಯಾಕೆಂದರೆ, ಈ ಬಗೆಯದ್ದೊಂದು ಸಿನಿಮಾ ನಿರ್ಮಾಣ ಮಾಡಬೇಕೆಂದರೆ ಬೇರೆಯದ್ದೇ ತೆರನಾದ ಮನಃಸ್ಥಿತಿ ಇರಬೇಕು. ವ್ಯವಹಾರವನ್ನು ಮೀರಿದ ಕಕ್ಕುಲಾತಿ ಇರಬೇಕು.
ಇಂಥಾ ಅಪರೂಪದ ಕಥಾ ಹೊಳಹುಗಳು ಅನೇಕರ ತಲೆಯಲ್ಲಿ ಮಿಂಚಿರಹುದು. ಮತ್ತದೆಷ್ಟೋ ಸಿನಿಮಾಗಳು ಬರವಣಿಗೆಯ ಹಂತದಲ್ಲಿಯೇ ಪರ್ಯಾವಸಾನ ಹೊಂದಿರಬಹುದು. ಅದೆಲ್ಲದಕ್ಕೂ ಪ್ರಧಾನ ಕಾರಣವಗಿ ನಿಲ್ಲೋದು ನಿರ್ಮಾಪಕರ ಅಸಹಕಾರ. ಸಕ್ರಿಪ್ಟ, ಸ್ಕ್ರೀನ್ ಪ್ಲೇ ಎದುರಗಿಟ್ಟರೆ `ಇಷ್ಟು ಸುರಿದರೆ ಎಷ್ಟು ಗಿಟ್ಟುತ್ತದೆ’ ಎಂಬಂಥಾ ಪಕ್ಕಾ ಕಮರ್ಶಿಯಲ್ ಮೆಂಟಾಲಿಟಿ ಎದೆಗೆ ರಾಚುವ ಕಾಲಮಾನವಿದು. ಇಂಥಾ ಹೊತ್ತಿನಲ್ಲಿ ನಿರ್ದೇಶಕ ಪೃಥ್ವಿ ಕೋಣನೂರು ಅವರ ಪ್ರತಿಭೆಯ ಮೇಲೆ ಭರವಸೆಯಿಟ್ಟು, ಪೂರ್ತಿ ಕಥೆಯನ್ನೂ ಕೇಳದೆ ಕೃಷ್ಣೇಗೌಡರು ನಿರ್ಮಾಣಕ್ಕೆ ಒಪ್ಪಿಕೊಂಡಿದ್ದರೆಂದರೆ, ಅವರ ಸದಭಿರುಚಿಯ ಕಾಳಜಿಯನ್ನು ಮೆಚ್ಚಿಕೊಳ್ಳದಿರಲು ಸಾಧ್ಯವಿಲ್ಲ!
ಅದೆಲ್ಲದರ ಭಾಗವಾಗಿಯೇ ಪಿಂಕಿ ಎಲ್ಲಿ ಚಿತ್ರ ಚೆಂದಗೆ ನಿರ್ಮಾಣಗೊಂಡಿದೆ. ಕೃಷ್ಣೇಗೌಡರ ಸಾಹಸದ ಭಾಗವಾಗಿಯೇ ಅದು ಈ ವಾರ ಬಿಡುಗಡೆಗೊಂಡು ಪ್ರೇಕ್ಷಕರನ್ನೆಲ್ಲ ತಲುಪಿಕೊಳ್ಳುತ್ತಿದೆ. ಹೀಗೆ ಸದಭಿರುಚಿಯ ಸಿನಿಮಾಗಳ ಗುಂಗಿಗೆ ಬಿದ್ದು, ಹಲವಾರು ಅಚ್ಚರಿಗಳ ಘಟಿಸಲು ಕಾರಣೀಭೂತರಾಗಿರುವ ಕೃಷ್ಣೇಗೌಡರ ಬದುಕಿನ ಹಾದಿ ಕೂಡಾ ನಾನಾ ಬಣ್ಣಗಳಿಂದ ಕಳೆಗಟ್ಟಿಕೊಂಡಿದೆ. ಬಹುಶಃ ನಿರ್ಮಾಪಕರಲ್ಲಿ ನಿರೀಕ್ಷಿಸಲಾಗದ ಅದೆಷ್ಟೋ ಪ್ರತಿಭೆಗಳಿಂದ ಕೃಷ್ಣೇಗೌಡರ ಕಲಾ ಪಯಣ ಸಮೃದ್ಧಗೊಂಡಿದೆ. ಈ ವರೆಗೂ ಅವರ ಬದುಕು ನಾನಾ ರೂಪಾಂತರಗಳನ್ನು ಎದುರುಗೊಂಡಿದೆ. ಹೀಗೆ ಯಾವ ಪಲ್ಲಟಗಳು ನಡೆದರೂ ಕಲೆಯ ಚುಂಗು ಹಿಡಿದು ಹೊರಟ ಕೃಷ್ಣೇಗೌಡರ ಬಹು ದೊಡ್ಡ ಶಕ್ತಿಯಾಗಿ ಕಾಣಿಸೋದು ರಂಗಭೂಮಿಯ ನಂಟು.
ಅಪ್ಪಟ ರೈತಾಪಿ ವರ್ಗದಿಂದ ಬಂದಿರುವ ಕೃಷ್ಣೇಗೌಡರು ಹಳ್ಳಿ ಸೀಮೆಯ ಶ್ರೀಮಂತ ಪರಿಸರದಲ್ಲಿ ಕಣ್ಣರಳಿಸಿದವರು. ಊರ ಹಬ್ಬಡ ಸಂದರ್ಭದಲ್ಲಿ ಅಹೋರಾತ್ರಿ ನಡೆಯುತ್ತಿದ್ದ ನಾಟಕಗಳಲ್ಲಿ ಬಾಲ ನಟನಾಗಿ ಅಭಿನಯಿಸುತ್ತಿದ್ದವರು. ಅದೇ ನಂಟು ಶಾಲಾ ಕಾಲೇಜು ದಿನಗಳಲ್ಲಿಯೂ ಕೃಷ್ಣೇಗೌಡರಿಗೆ ಕಲೆಯ ಗುಂಗು ಹತ್ತಿಸಿತ್ತು. ಡಿಗ್ರಿ ಕಲಿಕೆಯ ಸಂದರ್ಭದಲ್ಲಿ ಅಂತರ್ ಕಾಲೇಜು ನಾಟಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಕೃಷ್ಣೇಗೌಡರ ನಾಟಕಗಳ ಬಂಧ ಮತ್ತಷ್ಟು ಬಿಗಿಯಾಗಿತ್ತು. ನಂತರ ಬದುಕಿನ ಅನಿವಾರ್ಯತೆ ಎತ್ತೆತ್ತಲೋಹೊಯ್ದಾಡಿಸಿದರೂ ರಂಗಭೂಮಿಯನ್ನು ಆತ್ಮದಂತೆ ಹಚ್ಚಿಕೊಂಡಿದ್ದ ಅವರು ಹಲವಾರು ನಾಟಕ ತಂಡಗಳಲ್ಲಿ ಸಕ್ರಿಯರಾಗಿದ್ದರು. ನಂತರ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದುಕೊಂಡು ಅಭಿನಯವನು ಅನೂಚಾನವಾಗಿ ಮುಂದುವರೆಸಿದ್ದರು.
ನಂತರ ಆಕಾಶವಾಣಿಯ ಪ್ರಸಿದ್ಧ ನಾಟಕಗಳಿಗೆ ಧ್ವನಿ ನೀಡುತ್ತಾ ಒಂದಷ್ಟು ವರ್ಷಗಳನ್ನು ಸಾರ್ಥಕವಾಗಿ ಕಳೆದ ಕೃಷ್ಣೇಗೌಡರು, ಕಿರುತೆರೆಯತ್ತ ಹೊರಳಿಒಂಡು ಅಲ್ಲಿಯೂ ನಟನೆಯ್ನು ಮುಂದುವರೆಸಿದದರು. ಹಾಗೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ ನಂತರ, ಅವರ ಆಸಕ್ತಿ ಕೀಲಿಸಿಕೊಂಡಿದ್ದು ಸಿನಿಮಾ ರಂಗದತ್ತ. 1999ರಲ್ಲಿ ಸಿನಿಮಾ ಮಾಡಿಯೇ ತೀರುವ ಸಂಕಲ್ಪ ತೊಟ್ಟ ಅವರು ನಟ ಎಂಬ ಪ್ರಸಿದ್ಧ ನಾಟಕವನ್ನು `ಬಣ್ಣದ ಹೆಜ್ಜೆ’ ಎಂಬ ಸಿನಿಮಾ ರೂಪಕಿಳಿಸಿ ನಿರ್ದೇಶನ ಮಾಡಿದ್ದರು. ದೇವರಾಜ್, ವಿನಯಾ ಪ್ರಸಾದ್ಮುತದವರು ನಟಿಸಿದ್ದ ಆ ಚಿತ್ರ ದೊಡ್ಡ ಟ್ಟದಲ್ಲಿಯೇ ಗೆಲುವು ದಾಖಲಿಸಿತ್ತು. ಆ ನಂತರವೂ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಅವರು ಭಿನ್ನ ಹಾದಿಯಲ್ಲಿಯೇ ಉಂದುವರೆದುಕೊಂಡು ಬಂದಿದ್ದರು. ಆ ಯಾನವೀಗ ನಾನು ಕುಸುಮ ಮತ್ತು ಪಿಂಕಿ ಎಲ್ಲಿಯವರೆಗೂ ಹತ್ತಾರು ಆಯಾಮಗಳಲ್ಲಿ ಮುಂದುವರೆದುಕೊಂಡು ಬಂದಿದೆ.
ಇದಿಷ್ಟೇ ಅಲ್ಲ; ಕೃಷ್ಣೇ ಗೌಡರು ನಟ, ನಿರ್ದೇಶಕ, ನಿರ್ಮಾಪಕ ಎಂಬುದರಾಚೆಗೆ ಅವರೊಬ್ಬ ಸಾಹಸಿ. ಎಂಥಾಪರಿಸಥಿತಿಯಲ್ಲಿಯೂ ಸೆಡ್ಡು ಹೊಡೆದು ಅಂದುಕೊಂಡಿದ್ದನ್ನು ಸಾಧಿಸುವ ಛಲಗಾರ. ನೀವು ಡಬ್ಬಿಂಗ್ ಪರವಿದ್ದರೂ, ವಿರುದ್ಧವಿದ್ದರೂ ಕೃಷ್ಣೇಗೌಡರ ಹೋರಾಟದ ಹಾದಿಯನ್ನು ಮೆಚ್ಚಿಕೊಳ್ಳದಿರಲು ಸಾಧ್ಯವಿಲ್ಲ. ಡಬ್ಬಿಂಗ್ ವಿರುದ್ಧ ಹೋರಾಟ ಹುರಿಗೊಳ್ಳುತ್ತಿದ್ದ ಕಾಲದಲ್ಲಿಯೇ ಗಟ್ಟಿಯಾಗಿ ಡಬ್ಬಿಂಗ್ ಪರವಾಗಿ ಅಖಾಡಕ್ಕಿಳಿದಿದ್ದವರು ಕೃಷ್ಣೇಗೌಡ. ಆ ಹಾದಿಯಲ್ಲಿ ಅದೆಷ್ಟೇ ವಿರೋಧಾಭಾಸಗಳು ಎದುರಾದರೂ ಕೂಡಾ ತನ್ನ ನಿಲುವಿಗೆ ಬದ್ಧರಾಗಿದ್ದ ಅವರು, ಕಡೆಗೊಂದು ದಿನ ವ್ಯವಸ್ಥೆಯ ವಿರುದ್ಧವೇ ಕಾಲೂರಿ ನಿಂತಿದ್ದರು. ತಾನೇ ಮುಂದೆ ನಿಂತು ಪರ್ಯಾಯ ವಾಣಿಜ್ಯ ಮಂಡಳಿ ಸ್ಥಾಪಿಸಿದ್ದರು. ಆ ಹಂತದಲ್ಲಿ ಅದೆಂಥಾ ಪ್ರತಿರೋಧಗಳು ವ್ಯಕ್ತವಾದರ ಮುಂದುವರೆದ ಪರಿಣಾಮವಾಗಿಯೇ ಇಂದು ಪರ್ಯಾಯ ವಾಣಿಜ್ಯ ಮಂಡಳಿ ಬೃಹದಾಕಾರವಾಗಿ ಬೆಳೆದು ನಿಂತಿದೆ.
ಹೀಗೆ ಸಾಗಿ ಬಂದ ಕೃಷ್ಣಗೌಡರು ಕಲೆಯ ಸಾಂಗತ್ಯದಲಿಯೇ ಇಪ್ಪತ್ತೆಂಟು ವರ್ಷಗಳನ್ನು ಕಳೆದಿದ್ದಾರೆ. ಒಂದು ಕಾಲದಲ್ಲಿ ನಟನಾಗಬೇಕೆಬ ಉತ್ಕಟ ಆಕಾಂಕ್ಷೆಯಿಂದ ಗಾಧಿನಗರಕ್ಕೆ ಅಡಿಯಿರಿಸಿದ್ದವರು ಕೃಷ್ಣೇಗೌಡರು. ಈವತ್ತಿಗೆ ಅವರ ಪ್ರತಿಭೆಯ ಪ್ರಭೆ ನಟನೆಯಾಚೆಗೂ ಹಬ್ಬಿಕೊಂಡಿದೆ. ಒಂದು ಕಾಲದಲ್ಲಿ ಕೃಷ್ಣೇಗೌಡರು ಡಬ್ಬಿಂಗ್ ಪರವಾಗಿ ಧ್ವನಿ ಎತ್ತಿದಾಗ ವಿರೋಧಿಸಿದ್ದವರಲ್ಲಿಯೂ ಇದೀಗ ಅವರ ದೂರದರ್ಶಿತ್ವದ ಬಗೆಗೊಂದು ಮೆಚ್ಚುಗೆಮೂಡಿಕೊಂಡಿದೆ. ಯಾಕೆಂದರೆ, ಡಬ್ಬಿಂಗ್ ಇರದಿದ್ದ ಕಾಲದಲ್ಲಿ ದೊಡ್ಡ ಮೊತ್ತಕ್ಕೆ ಪರಭಾಷಾ ಚಿತ್ರಗಳ ಹಕ್ಕುಗಳನ್ನು ಖರೀದಿಸಿ ಕನ್ನಡದಲ್ಲಿ ರೀಲು ಸುತ್ತೋದೇ ಮಹಾನ್ ಸಾಧನೆ ಎಂಬಂತಾಗಿತ್ತು. ಆದರೀಗ ಸ್ವಂತದ್ದನ್ನು ಧೇನಿಸುವ ಅನಿವಾರ್ಯತೆ ಎದುರಾಗಿದೆ. ಅಂಥಾ ತುರ್ತಿನ ಭಾಗವಾಗಿಯೇ ಕೇಜಿಎಫ್ ಕಾಂತಾರದಂಥಾ ಸೃಷ್ಟಿ ಸಾಧ್ಯವಾಗಿದೆ. ಆ ಪ್ರಕ್ರಿಯೆಯಲ್ಲಿ ಕೃಷ್ಣೇಗೌಡರ ಪಾಲಂತೂ ಇದ್ದೇ ಇದೆ!
ಇದೀಗ ಕೃಷ್ಣೇಗೌಡರು ಚಿತ್ರ ನಿರ್ಮಾಣ, ಪರ್ಯಾಯ ವಾಣಿಜ್ಯ ಮಂಡಳಿಯ ದೇಖಾರೇಖಿಯಲ್ಲಿ ಬ್ಯುಸಿಯಾಗಿದ್ದಾರೆ. ಇದೆಲ್ಲದರ ನಡುವೆಯೂ ನಟನಾಗಿ ಬಹು ಬೇಡಿಕೆಯನ್ನೂ ಹೊಂದಿದ್ದಾರೆ. ಈ ಕ್ಷಣಕ್ಕೂ ಅನೇಕಾನೇಕ ಅವಕಾಶಗಳು ಅವರನ್ನರಸಿ ಬರುತ್ತಿವೆ. ತಾನು ಆ ಪಾತ್ರಕ್ಕೆ ಹೊಂದುತ್ತೇನೆಂಬ ಭರವಸೆ ಮೂಡಿದರೆ ಮಾತ್ರವೇ ಕೃಷ್ಣೇಗೌಡರದನ್ನು ಒಪ್ಪಿಕೊಳ್ಳುತ್ತಾರೆ. ಇದರ ಜೊತೆಗೇ ನಿರ್ದೇಶಕನಾಗಿಯೂ ಅವರು ಕ್ರಿಯಾಶೀಲರಾಗಿದ್ದಾರೆ. ಸದ್ಯಕ್ಕೀಗ ಬಿ.ಟಿ ಲಲಿತಾ ನಾಯಕ್ ಅವರ ಗತಿ ಎಂಬ ಕಥೆಯನ್ನು ಸಿನಿಮಾ ಮಾಡುವ ಸಲುವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಸ್ಕ್ರಿಪ್ಟ್ ಕೆಲಸವೂ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇದರಲ್ಲಿಯೂ ಕೂಡಾ ಅವರು ರಂಗಭೂಮಿ ಪ್ರತಿಭೆಗಳಿಗೇ ಮೊದಲ ಆದ್ಯತೆ ಕೊಡಲಿದ್ದಾರೆ. ಅವರ ಕಡೆಯಿಂದ ಇನ್ನೂ ಬಹಳಷ್ಟು ಸದಭಿರುಚಿಯ ಸಿನಿಮಾಗಳ ಹೊರಬರಲೆಂದು ಆಶಿಸೋಣ…