ಕೆಲವೊಮ್ಮೆ ಕನ್ನಡ ಚಿತ್ರರಂಗದಲ್ಲಿ ( kannada film industry) ಒಂದೇ ಒಂದು ಹೆಜ್ಜೆಗೆ ಭರಪೂರ ಗೆಲುವು ಮುತ್ತಿಕೊಳ್ಳುವ ಪವಾಡಗಳು ಸಂಭವಿಸುತ್ತವೆ. ಕೆಲ ಮಂದಿ ಎಲ್ಲ ಅರ್ಹತೆಗಳಿದ್ದರೂ ಅವಕಾಶ ಸಿಗದೆ, ಸರಿಯಾದೊಂದು ಗೆಲುವು ಕೈ ಹಿಡಿಯದೆ ಪಡಿಪಾಟಲು ಪಡುತ್ತಾರೆ. ಅವರ ಆಸುಪಾಸಿನಲ್ಲಿಯೇ ಅಡ್ಡಾಡುವ ಮತ್ತೆ ಕೆಲವರು ಲೀಲಾಜಾಲವಾಗೆಂಬಂತೆ ಆಗಮಿಸಿ, ಅಚ್ಚರಿ ಪಡುವಂಥಾ ಗೆಲುವು ದಾಖಲಿಸಿಬಿಡುತ್ತಾರೆ. ಇಂಥ ಅದೃಷ್ಟವಂತ ನಟ ನಟಿಯರ ಸಾಲಿಗೆತ್ತೀಚಿನ ಸೇರ್ಪಡೆ ಕಿಸ್ ಹುಡುಗಿ ಶ್ರೀಲೀಲಾ. (sreeleela) ಅದಾಗ ತಾನೇ ಡಾಕ್ಟರಿಕೆಯ ಕಲಿಕೆಯಲ್ಲಿದ್ದ ಶ್ರೀಲೀಲಾ ಕಿಸ್ ಅಂತೊಂದು ಸಿನಿಮ ಮೂಲಕ ಆಗಮಿಸಿ, ಅವಕಾಶ ಗಿಟ್ಟಿಸಿಕೊಂಡ ರೀತಿ ಕಂಡು ಎಲ್ಲರೂ ಕಂಗಾಲಾಗಿದ್ದರು.
ಇನ್ನೇನು ಕನ್ನಡದಲ್ಲಿ ಈಕೆ ಮುಖ್ಯ ನಾಯಕಿಯಾಗಿ ನೆಲೆ ಕಂಡುಕೊಳ್ಳೋದು ಗ್ಯಾರೆಂಟಿ ಅಂತಲೇ ಅನೇಕರು ಅಂದುಕೊಂಡಿದ್ದರು. ವಿರಾಟ್‍ಗೆ (virat) ಜೋಡಿಯಾಗಿ ಕಾಣಿಸಿಕೊಂಡಿದ್ದ ಈ ಹುಡುಗಿ ಮಾಡಿದ್ದ ಮೋಡಿ ಸಾಮಾನ್ಯದ್ದೇನಲ್ಲ. ಆದರೆ ಲತ್ತೆ ಆಸಾಮಿ (dhanveer) ಧನ್ವೀರನೊಂದಿಗೆ ಬೈ ಟು ಲವ್ ಎಂಬ ಸಿನಿಮಾದಲ್ಲಿ ನಟಿಸಿದಳು ನೋಡಿ? ಆಕೆಯ ಸುತ್ತಾ ನಾನಾ ಪಲ್ಲಟಗಳು ಜರುಗಲಾರಂಭಿಸಿದ್ದವು. ಅದ್ಯಾರು ಹಬ್ಬಿಸಿದರೋ ಗೊತ್ತಿಲ್ಲ; ಒಂದಷ್ಟು ಕಾಲ ಶ್ರೀ ಲೀಲಾ ಮತ್ತು ಧನ್ವೀರ್ ಲವ್ವಲ್ಲಿ ಬಿದ್ದಿದ್ದಾರೆ ಎಂಬಲ್ಲಿಯವರೆಗೂ ರೂಮರುಗಳು ಹಬ್ಬಿಕೊಂಡಿದ್ದವು. ಅದರ ಬೆನ್ನಲ್ಲಿಯೇ ಶುರುವಾಗಿದ್ದು ಹಲ್ಲಿನ ಡಾಕ್ಟರ್ ಸ್ವರ್ಣಲತಾಳ ಪುಡಿ ರೌಡಿಗಿರಿ. ಅಂದಹಾಗೆ, ಈ ಸ್ವರ್ಣಲತಾ ಬಳುಕೋ ಬಳ್ಳಿ ಶ್ರೀಲೀಲಾಳ ಸ್ವಂತ ಅಮ್ಮ!
ಹಲ್ಲಿನ ಡಾಕ್ಟರ್ ಆಗಿದ್ದುಕೊಂಡು, ಮಗಳನ್ನೂ ಡಾಕ್ಟರ್ ಮಾಡೋ ಕನಸು ಹೊತ್ತಿದ್ದಾಕೆ ಸ್ವರ್ಣಲತಾ. ಸಿನಿಮಾ ಒಪ್ಪಿಕೊಳ್ಳುವಾಗ, ಮಗಳ ಇಂಟರ್‍ವ್ಯೂ ಮುಂತಾದ ಚಟುವಟಿಕೆಗಳಲ್ಲಿಯೂ ತಾನ ಮಧ್ಯವರ್ತಿಯಾಗಿ ನಿಂತು ಶ್ರೀಲೀಲಾಳನ್ನು ಜತನದಿಂದ ಕಾಪಾಡುತ್ತಿದ್ದಾಕೆ ಸ್ವರ್ಣಲತಾ. ಇಂಥಾ ಹೆಂಗಸಿಗೆ ಅದ್ಯಾತರ ಪಿತ್ಥ ಕೆದರಿಕೊಂಡಿತೋ ಗೊತ್ತಿಲ್ಲ; ಆಕೆ ಏಕಾಏಕಿ ಅಲಯನ್ಸ್ ವಿಶ್ವವಿದ್ಯಾಲಯದ ಸಂಸ್ಥಾಪಕ ಕಂ ಕಚ್ಚೆಹರುಕ ಮಧುಕರ ಅಂಗೂರನೊಂದಿಗೆ ಠಳಾಯಿಸಲಾರಂಭಿಸಿದ್ದಳು. ಅಂಗೂರನ ಫ್ಯಾಮಿಲಿ ಕದನದಲ್ಲಿ ಎಂಟಿ ಕೊಟ್ಟು ಅದೊಂದು ದಿನ ವೀರಾಗ್ರಣಿಯಂತೆ ವಿವಿಗೆ ನುಗ್ಗಿ ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಿದ್ದಳು. ಈ ಸಂಬಂಧವಾಗಿ ಕೇಸು ಜಡಿಸಿಕೊಳ್ಳುತ್ತಲೇ ಮಾಧ್ಯಮಗಳ ಸುದ್ದಿಗೂ ಆಹಾರವಾಗಿದ್ದಳು.
ಹಾಗೆ ಸ್ವರ್ಣಲತಾ ರೌಡಿಗಿರಿ ಪ್ರದರ್ಶಿಸಿ ತಗುಲಿಕೊಳ್ಳುತ್ತಲೇ, ಆಕೆಯನ್ನು ಮೀಡಿಯಾ ಮಂದಿ ಗುರುತಿಸಿದ್ದು ಶ್ರೀಲೀಲಾಳ ಹೆಸರಿನಿಂದಲೇ. ಒಂದು ಮೂಲದ ಪ್ರಕಾರ ಸೂಕ್ಷ್ಮ ಮನಸಿನ ಶ್ರೀಲೀಲಾ ಅಮ್ಮನ ಅವಾಂತರದಿಂದ ರೋಸತ್ತು ಹೋಗಿದ್ದಳು. ತನ್ನ ಸುತ್ತ ಹಬ್ಬಿಕೊಳ್ಳುತ್ತಿರುವ ಸುದ್ದಿ ಕಂಡು ಮರುಗಿದ್ದಳು. ಆ ಹೊತ್ತಿಗಾಗಲೇ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಳಲ್ಲಾ? ಸದ್ಯಕ್ಕೆ ತೆಲುಗಿನಲ್ಲಿಯೇ ಹಾಯಾಗಿರುವ ತೀರ್ಮಾನವನ್ನು ಶ್ರೀಲೀಲಾ ತೆಗೆದುಕೊಂಡಂತಿದೆ. ಇದೀಗ ಅಲ್ಲಿ ಈಕೆ ಅದೆಂಥಾ ಬೇಡಿಕೆ ಹೊಂದಿದ್ದಾಳೆಂದರೆ, ಏಕಕಾಲದಲ್ಲಿಯೇ ಏಳೆಂಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾಳೆ. ಪ್ರಿನ್ಸ್ ಮಹೇಶ್‍ಗೂ ಸದ್ಯದಲ್ಲಿಯೇ ಜೋಡಿಯಾಗಲಿದ್ದಾಳೆಂಬ ಮಾತುಗಳೂ ಕೇಳಿ ಬರುತ್ತಿವೆ.
ಇದೆಲ್ಲ ಏನೇ ಇದ್ದರೂ ಶ್ರೀಲೀಲಾಳ ವ್ಯಕ್ತಿತ್ವದಲ್ಲಿ ಮೆಚ್ಚಿಕೊಳ್ಳುವಂಥಾ ಅನೇಕ ಗುಣಗಳಿದ್ದಾವೆ. ಯಾಕೆಂದರೆ, ಕನ್ನಡ ಚಿತ್ರಂಗದಲ್ಲಿ ಚಿಗುರಿಕೊಂಡು ಒಂದೇ ಒಂದು ಬೇರೆ ಭಷೆಯ ಚಿತ್ರದಲ್ಲಿ ನಟಿಸಿದರೂ ಕೆಲ ನಟಿಯರು ತಿಮಿರು ತೋರಿಸುತ್ತಾರೆ. ರಶ್ಮಿಕಾ ಮಂದಣ್ಣನಂಥಾ ಮಂದ ಬುದ್ಧಿಯ ನಟಿಯರು ಈ ಕಾರಣದಿಂದಲೇ ಕನ್ನಡಿಗರೆಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಆದರೆ ಶ್ರೀಲೀಲ ಮಾತ್ರ ಸಂಪೂರ್ಣ ಭಿನ್ನ. ಆಕೆ ತೆಲುಗು ನೆಲದಲ್ಲಿ ನಿಂತು ಕನ್ನಡ ಚಿತ್ರರಂಗವನ್ನು ಕೊಂಡಾಡುತ್ತಾಳೆ. ಕನ್ನಡದ ಬಗೆಗಿನ ಅಭಿಮಾನ ಮೆರೆಯುತ್ತಾಳೆ. ಅಂತೂ ಅಮ್ಮನ ರಂಖಲುಗಳಿಂದ ಬೇಸತ್ತಿರುವ ಶ್ರೀಲೀಲಾ ತೆಲುಗಿನಲ್ಲಿಯೇ ತಂಪಾಗಿದ್ದಾಳೆ!