ಕಲಾತ್ಮಕ ಚೌಕಟ್ಟಿನ ಚಿತ್ರಗಳೆಲ್ಲ ಸೀಮಿತ ಚೌಕಟ್ಟಿನಲ್ಲಿಯೇ ಬಂಧಿಯಾಗಿ, ಪ್ರೇಕ್ಷಕರ ಕೈಗೆಟುಕದೆ ಮರೆಯಾಗುತ್ತವೆ ಅಂತೊಂದು ಆಪಾದನೆಯಿತ್ತು. ಅದು ಪ್ರಯೋಗಾತ್ಮಕ ಗುಣಗಳ ಸಿನಿಮಾಗಳನ್ನು ಕನವರಿಸುವ ಈ ನೆಲದ ಸದಭಿರುಚಿಯ ಪ್ರೇಕ್ಷಕರ ಮನದಾಳದ ಕೊರಗೂ ಹೌದು. ಗಿರೀಶ್ ಕಾಸರವಳ್ಳಿಯಂಥಾ (girish kasaravalli) ಅಸಾಧಾರಣ ನಿರ್ದೇಶಕರುಗಳೇ ಎಲ್ಲ ಪ್ರೇಕ್ಷಕರಿಗೂ ತಮ್ಮ ಸಿನಿಮಾಗಳನ್ನು ತಲುಪಿಸುವಲ್ಲಿ ಕೈ ಚಲ್ಲಿದ್ದಾರೆಂಬ ಮಾತೂ ಇದೆ. ಆದರೀಗ ಆ ಕೊರಗು, ಆಪಾದನೆಗಳನ್ನೆಲ್ಲ ಸುಳ್ಳಾಗಿಸುವಂತೆ ಪೃಥ್ವಿ ಕೋಣನೂರು (prithvi konanuru) ನಿರ್ದೇಶನದ `ಪಿಂಕಿ ಎಲ್ಲಿ?’ (pinki elli?) ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲು ಅಣಿಯಾಗಿದೆ. ಇದೇ ವಾರ ಅಂದರೆ, ಜೂನ್ 2ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.
ಅಷ್ಟಕ್ಕೂ `ಪಿಂಕಿ ಎಲ್ಲಿ’ ಚಿತ್ರ ಸದ್ದು ಮಾಡಲು ಶುರುವಿಟ್ಟು ಒಂದಷ್ಟು ಕಾಲವೇ ಕಳೆದಿದೆ. ಬದುಕಿಗೆ ಹತ್ತಿರಾದ, ಆದ್ರ್ರಗೊಳಿಸುವ ಕಥಾ ಹಂದರದ ಸಿನಿಮಾ ಅದ್ಯಾವುದೇ ಮಾದರಿಯದ್ದಾಗಿದ್ದರೂ ತಾನೇತಾನಾಗಿ ಜನಮನ ಸೆಳೆಯುತ್ತೆ. ಈ ಮಾತಿಗೆ ತಾಜಾ ಉದಾಹರಣೆಯಂತಿರುವ ಚಿತ್ರ `ಪಿಂಕಿ ಎಲ್ಲಿ’. ಇದು ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹಲವಾರು ಪ್ರಶಸ್ತಿಗಳಗೂ ಭಾಜನವಾಗಿದೆ. ಹೀಗೆ ಸದ್ದು ಮಾಡುತ್ತಿರೋ ಈ ಸಿನಿಮಾದ ಒಂದಷ್ಟು ಝಲಕ್ಕುಗಳು ಜಾಹೀರಾಗುತ್ತಲೇ ಅದನ್ನು ಪೂರ್ತಿಯಾಗಿ ಕಣ್ತುಂಬಿಕೊಳ್ಳಬೇಕೆಂಬ ತುಡಿತ ಕೂಡಾ ಪ್ರೇಕ್ಷಕರಲ್ಲಿ ತೀವ್ರವಾಗಿತ್ತು. ಅದು ದಿನದೊಪ್ಪತ್ತಿನಲ್ಲೇ ಸಾಕಾರಗೊಳ್ಳುತ್ತಿದೆ.
ಮನಸು ಮುರಿದುಕೊಂಡ ದಾಂಪತ್ಯ, ತನ್ನ ಅಬೋಧ ಮಗುವಿನೊಂದಿಗೆ ಪತ್ಯೇಕವಾಗಿ ಬದುಕಲಾರಂಭಿಸಿದ ಹೆಣ್ಣು ಮತ್ತು ಯಾಂತ್ರಿಕ ಬದುಕಿನ ಇಕ್ಕಳಕ್ಕೆ ಸಿಕ್ಕ ಅನೇಕ ಆಘಾತಕರ ಘಟನಾವಳಿಗಳ ಸುತ್ತ ಪಿಂಕಿ ಎಲ್ಲಿ ಚಿತ್ರದ ಕಥಾ ಹಂದರ ಸುತ್ತುತ್ತದೆ. ಸಹಜಾತಿ ಸಹಜವಾಗಿ ದೃಷ್ಯಗಳು ಕದಲಿದರೂ, ಒಂದು ಅಬ್ಬರದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಕ್ಕಿಂತಲೂ ಒಂದು ಕೈ ಮಿಗಿಲಾದ ಅನುಭೂತಿ ಕೊಡಮಾಡೋದು ಪಿಂಕಿಯ ಸ್ಪೆಷಾಲಿಟಿ. ಇಲ್ಲಿ ಕಿವಿಗಡಚಿಕ್ಕುವ ಹಿನ್ನೆಲೆ ಸಂಗೀತವಿಲ್ಲ. ಯಾವ ಪಾತ್ರಗಳೂ ವಿನಾಕಾರಣ ಅಬ್ಬರಿಸೋದಿಲ್ಲ. ಆದರೆ ಪ್ರತೀ ಪಾತ್ರಗಳ ಏರಿಳಿತಗಳೂ ಎದೆಗಿಳಿಯುತ್ತವೆ. ಅಲ್ಲಿನ ಪಲ್ಲಟಗಳು ಎದೆಗಿಳಿದು ಕಾಡುತ್ತವೆ. ಒಟ್ಟಾರೆಯಾಗಿ ಬೇರೆಯದ್ದೇ ತೆರನಾದ ಫೀಲ್ ಒಂದನ್ನು ಪ್ರೇಕ್ಕರೆಲ್ಲರಿಗೂ ಪಿಂಕಿ ಎಲ್ಲಿ ಚಿತ್ರ ದಕ್ಕಿಸೋದರಲ್ಲಿ ಯಾವ ಸಂದೇಹವೂ ಇಲ್ಲ.
ನಿರ್ದೇಶಕ ಪೃಥ್ವಿ ಅಂಥಾದ್ದೊಂದು ಅಮೋಘ ಪಥದಲ್ಲಿ ಒಂದಿಡೀ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆಂಬ ಮೆಚ್ಚುಗೆ ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಹಾಗೊಂದು ಗಟ್ಟಿತನ ಇಲ್ದೇ ಹೋಗಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಲೂರಿ ನಿಂತು, ಪ್ರಶಸ್ತಿಗಳನ್ನು ಬಾಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಚಿತ್ರಮಂದಿರಗಳಿಗೆ ಎಂಟ್ರಿ ಕೊಟ್ಟು ಬಚಾಯಿಸಿಕೊಳ್ಳುವ ಭರವಸೆ ಮೂಡೋದೂ ಸಾಧ್ಯವಿರುತ್ತಿರಲಿಲ್ಲ. ಈ ಹಿಂದೆ ರೈಲ್ವೇ ಚಿಲ್ಡ್ರನ್ ಚಿತ್ರ ಮೂಲಕ ಅಗಾಧ ಪ್ರಮಾಣದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದವರು ನಿರ್ದೇಶಕ ಪೃಥ್ವಿ ಕೋಣನೂರು. ಅವರೀಗ ಹಲವಾರು ವರ್ಷಗಳ ಪರಿಶ್ರಮದ ಫಲವಾಗಿ ಪಿಂಕಿ ಎಲ್ಲ ಚಿತ್ರವನ್ನು ರೂಪಿಸಿದ್ದಾರೆ. ವಿಶ್ವ ಮಟ್ಟದಲ್ಲಿ ಮಿಂಚಿದ್ದಾರೆ.
ಇನ್ನುಳಿದಂತೆ, ಪಿಂಕಿ ಎಲ್ಲಿ ಚಿತ್ರದಲ್ಲಿ ಪ್ರಧಾನವಾಗಿ ಗಮನ ಸೆಳೆಯುವುದು ತಾರಾಗಣ. ಇದರ ಮುಖ್ಯಭೂಮಿಕೆಯಲ್ಲಿ ರಂಗಭೂಮಿಯ ಪ್ರತಿಭಾನ್ವಿತ ಕಲಾವಿದೆ ಅಕ್ಷತಾ ಪಾಂಡವಪುರ ನಟಿಸಿದ್ದಾರೆ. ದೀಪಕ್ ಸುಬ್ರಮಣ್ಯ, ಪೃಥ್ವಿ ಕೋಣನೂರು ಕೂಡಾ ಪಾತ್ರಗಳಾಗಿದ್ದಾರೆ. ಅಭಿನಯದ ಗಂಧವಿಲ್ಲದ ಮಹಿಳೆಯರೂ ಕೂಡಾ ಮುಖ್ಯ ಪಾತ್ರಗಳಿಗೆ ಜೀವ ತುಂಬಿರುವುದು ಈ ಸಿನಿಮಾದ ಮತ್ತೊಂದು ಆಕರ್ಷಣೆ. ಅಕ್ಷತಾ ಯಾವುದೇ ಬಗೆಯ ಪಾತ್ರಗಳಿಗಾದರೂ ಸೈ ಅನ್ನುವಂಥಾ ಕಸುವಿರುವ ನಟಿ. ತನ್ನದೇ ರಂಗಭೂಮಿ ತಂಡ ಕಟ್ಟಿಕೊಂಡು ಸಕ್ರಿಯವಾಗಿದ್ದುಕೊಂಡೇ, ಲೀಕ್ ಔಟ್ ಎಂಬ ರಂಗ ಪ್ರಯೋಗದ ಮೂಲಕ ಅಚ್ಚರಿ ಹುಟಿಸಿರುವವರು ಅಕ್ಷತಾ ಪಾಂಡವಪುರ. ಅಂಥಾ ಕಲಾವಿದೆಗೇ ಸವಾಲಾಗುವ ಚಹರೆಯ ಪಾತ್ರವನ್ನಿಲ್ಲಿ ನಿರ್ದೇಶಕ ಪೃಥ್ವಿ ರೂಪಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡೇ ಅಕ್ಷತಾ ಆ ಪಾತ್ರವನ್ನು ಜೀವಿಸಿದ್ದಾರೆ. ಇದರೊಂದಿಗೆ ವಿಶ್ವ ಮಟ್ಟದಲ್ಲಿಯೂ ಗಮನ ಸೆಳೆದಿದ್ದಾರೆ.

ಇಂಥಾ ಅಪರೂಪದ ಚಿತ್ರ ಈ ಪರಿಯಾಗಿ ಗಮನ ಸೆಳೆದಿದೆಯಲ್ಲಾ? ಅದರ ಹಿಂದೆ ಹತ್ತಾರು ಮಂದಿಯ ಶ್ರಮ ಇರುವುದು ನಿಜ. ಆದರೆ ಅದೆಲ್ಲದಕ್ಕೂ ಪ್ರಧಾನ ಪ್ರೇರಣೆಯಾಗಿ ನಿಲ್ಲುವವರು ನಿರ್ಮಾಪಕರಾದ ಕೃಷ್ಣೇಗೌಡ. ಪರ್ಯಾಯ ವಾಣಿಜ್ಯ ಮಂಡಳಿಯ ಅಧ್ಯಕ್ಷರೂ ಆಗಿರುವ ಕೃಷ್ಣೇಗೌಡರು ನಟರಾಗಿ ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಪ್ರಸಿದ್ಧರು. ರಂಗಭೂಮಿಯ ನಂಟಿನಿಂದ ಭಿನ್ನ ಅಭಿರುಚಿಯನ್ನು ರೂಢಿಸಿಕೊಂಡಿರುವ ಅವರು, ಆ ಬಲದಿಂದಲೇ ಪಿಂಕಿ ಎಲ್ಲಿ ಚಿತ್ರವ್ನು ನಿರ್ಮಾಣ ಮಾಡಿದ್ದಾರೆ. ವ್ಯಾವಹಾರಿಕ ದೃಷಿಕೋನದಾಚೆ ಇದನ್ನು ನಿರ್ಮಾಣ ಮಾಡಿದ್ದರೂ ಕೂಡಾ, ವ್ಯಾವಹಾರಿಕವಾಗಿಯೂ ಗೆಲುವಿನ ನಗೆ ಈ ಬೀರಿದ್ದಾರೆ. ಹೀಗೆ ಎಲ್ಲ ಬಗೆಯಲ್ಲಿಯೂ ವಿಶೇಷ ಅನ್ನಿಸಿಕೊಂಡಿರುವ ಪಿಂಕಿ ಎಲ್ಲಿ ಚಿತ್ರ ತೆರೆಗಾಣಲು ದಿನಗಣನೆ ಶುರುವಾಗಿದೆ…