ಕಿರುತೆರೆಯಿಂದ ಹಿರಿತೆರೆಗೆ (film industry) ಬಂದು ಮಿಂಚಿದ ನಾಯಕ, ನಾಯಕಿಯರದ್ದೊಂದು ದಂಡು ಕನ್ನಡ ಚಿತ್ರರಂಗದಲ್ಲಿದೆ. ಹಾಗೆ ನೋಡಿದರೆ, ಸಿನಿಮಾ ರಂಗಕ್ಕೆ ಹೆಜ್ಜೆಯಿಡುವವರೆಲ್ಲ ಕಿರುತೆರೆಯನ್ನು ಮೊದಲ ಮೆಟ್ಟಿಲೆಂದೇ ಪರಿಭಾವಿಸುತ್ತಾರೆ. ಹಾಗೆ ಧಾರಾವಾಹಿಗಳಲ್ಲಿ ನಟಿಸಿ ಒಂದಷ್ಟು ಹೆಸರು ಮಾಡುತ್ತಲೇ ಸಿನಿಮಾ ರಂಗಕ್ಕೆ ಅಡಿಯಿರಿಸೋದು ಮಾಮೂಲು. ಆದರೆ, ಸಿನಿಮಾ ರಂಗದಲ್ಲಿ ಅದೃಷ್ಟವೆಂಬುದು ಎಲ್ಲರಿಗೂ ಒಲಿದು ಬರೋದಿಲ್ಲ. ಕೆಲವೇ ಕೆಲ ಮಂದಿಯನ್ನು ಮಾತ್ರವೇ ಸಿನಿಮಾರಂಗ ಬರಸೆಳೆದು ಅಪ್ಪಿಕೊಳ್ಳುತ್ತೆ. ಅಂಥಾದ್ದೊಂದು ಬೆಚ್ಚಗಿನ ಅಪ್ಪುಗೆ ಪಡೆಯೋ ಎಲ್ಲ ಲಕ್ಷಣಗಳನ್ನೂ ಹೊಂದಿರುವಾಕೆ (supritha sathyanarayan) ಸುಪ್ರಿತಾ ಸತ್ಯನಾರಾಯಣ್. ಬಹುಶಃ ಈ ಹೆಸರು ಹೇಳಿದರೆ ಬಹುತೇಕರಿಗೀಕೆಯ ಗುರುತು ಹತ್ತೋದು ಕಷ್ಟ. (seetha vallabha) ಸೀತಾವಲ್ಲಭ ಧಾರಾವಾಹಿಯ ನಾಯಕಿ ಎಂದರೆ ಸಾದಾ ಸೀದಾ ಸ್ವರೂಪದ, ಸ್ನಿಗ್ಧ ಸೌಂದರ್ಯದ ಸುಪ್ರಿತಾ ತಮ್ಮ ಮನೆ ಮಗಳೆಂಬಂಥಾ ಭಾವ ಮೂಡಿಕೊಳ್ಳಬಹುದೇನೋ!
ಸೀತಾ ವಲ್ಲಭ ಧಾರಾವಾಹಿ ಒಂದಷ್ಟು ಕಂತುಗಳಲ್ಲಿ ಪ್ರಸಾರವಾಗಿತ್ತು. ಅದರ ನಾಯಕಿಯಾಗಿ, ಅನಾಥ ಭಾವ ಹೊದ್ದುಕೊಂಡ ಹುಡುಗಿಯಾಗಿ ನಟಿಸೋ ಮೂಲಕ ಸುಪ್ರಿತಾ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದಳು. ಈ ಹುಡುಗಿ ನಟನೆಯಲ್ಲಿ ದೊಡ್ಡ ಮಟ್ಟಕ್ಕೇರುತ್ತಾಳೆಂಬಂಥಾ ಭರವಸೆ ಕೂಡಾ ಮೂಡಿಕೊಂಡಿತ್ತು. ಇದೆಲ್ಲದರ ನಡುವೆ ಆ ಧಾರಾವಾಹಿ ಅದೇಕೋ ಪ್ರಸಾರ ನಿಲ್ಲಿಸಿದ ನಂತರ ಕಿರುತೆರೆ ಪ್ರೇಕ್ಷಕರು ನಿಜಕ್ಕೂ ಈಕೆಯನ್ನು ಮಿಸ್ ಮಾಡಿಕೊಳ್ಳಲಾರಂಭಿಸಿದ್ದು ನಿಜ. ಇದೇ ಹೊತ್ತಲ್ಲಿ ಸದ್ದಿಲ್ಲದೆ ಹಿರಿತೆರೆ ಎಂಟ್ರಿಗೆ ಭೂಮಿಕೆ ಸಿದ್ಧಪಡಿಸಿಕೊಳ್ಳಲಾರಂಭಿಸಿದ್ದ ಸುಪ್ರಿತಾ, ಇದೀಗ ಶಾಲಿವಾಹನ ಶಕೆ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಹೊರಬಿದ್ದಿತ್ತು. ಇದೀಗ ಆಕೆ ನಾಯಕಿಯಾಗಿರುವ ಮೆಲೋಡಿ ಡ್ರಾಮಾ ಎಂಬ ಮತ್ತೊಂದು ಚಿತ್ರ ಸದ್ದೇ ಇಲ್ಲದೆ ಬಿಡುಗಡೆಗೆ ಅಣಿಯಾಗಿದೆ!
ಸಾಮಾನ್ಯವಾಗಿ ಹೀಗೆ ಹಿರಿತೆರೆಗೆ ಆಗಮಿಸುವ ಪ್ರತೀ ನಟ ನಟಿಯರು ತಮ್ಮದೇ ಅಭಿರುಚಿಯ, ಡಿಫರೆಂಟಾದ ಪಾತ್ರವನ್ನು ಧ್ಯಾನಿಸುತ್ತಿರುತ್ತಾರೆ. ಅದು ದಕ್ಕುವುದು ಮಾತ್ರ ಅದೆಷ್ಟೋ ಗಾವುದದಷ್ಟು ಅವುಡುಗಚ್ಚಿ ಸಾಗಿದ ನಂತರವೇ. ಈ ವಿಚಾರದಲ್ಲಿ ಸುಪ್ರಿತಾ ನಿಜಕ್ಕೂ ಅದೃಷ್ಟವಂತೆ. ಯಾಕೆಂದರೆ, ಮೊದಲ ಹೆಜ್ಜೆಯಲ್ಲಿಯೇ ಭಿನ್ನವಾದ ಪಾತ್ರ ಆಕೆಗೆ ಸಿಕ್ಕಿದೆ. ಗಿರೀಶ್ ನಾಯಕನಾಗಿ ನಟಿಸಿ, ನಿರ್ದೇಶನ ಮಾಡುತ್ತಿರುವ ಶಾಲಿವಾಹನ ಶಕೆ ಚಿತ್ರದಲ್ಲಿ ಹಳ್ಳಿ ಹಿನ್ನೆಲೆಯ ಕಾಲೇಜು ಹುಡುಗಿಯಾಗಿ ಸುಪ್ರಿತಾ ನಟಿಸುತ್ತಿದ್ದಾಳಂತೆ. ಆ ಪಾತ್ರದ ಬಗ್ಗೆ ಆಕೆಯೇ ಮೋಹಗೊಂಡಿದ್ದಾಳೆ. ಯಡಿಯೂರು ಶೈಲಿಯ ಭಾμÉಯೊಂದಿಗೆ ಚಿತ್ರದುದ್ದಕ್ಕೂ ಕಾಣಿಸಿಕೊಳ್ಳಲಿರೋದರ ಬಗ್ಗೆ ಥ್ರಿಲ್ ಆಗಿದ್ದಾಳೆ. ಅದರ ಬೆನ್ನಲ್ಲಿಯೇ ಸದ್ದು ಮಾಡುತ್ತಿರುವ ಮೆಲೋಡಿ ಡ್ರಾಮಾದಲ್ಲಿ ಸುಪ್ರಿತಾ ಬ್ಯಾಂಕ್ ಉದ್ಯೋಗಿಯಾಗಿ, ಭಿನ್ನ ಪಾತ್ರಕ್ಕೆ ಜೀವ ತುಂಬಿದ್ದಾಳೆ.
ಈ ಹಿಂದೆ ರುಗ್ಣ ಎಂಬ ಚಿತ್ರದಲ್ಲಿ ಬರಹಗಾರ್ತಿಯಾಗಿ ಕಂಗೊಳಿಸಿದ್ದ ಸುಪ್ರಿಯಾ ಪಾಲಿಗಿದು ಮೂರನೇ ಚಿತ್ರ. ನಿಜ ಜೀವನದಲ್ಲಿಯೂ ಬರವಣಿಗೆಯ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಸುಪ್ರಿಯಾ, ಅದುವೇ ಕಥೆಯನ್ನು ಆರಿಸಿಕೊಳ್ಳುವ ಭಿನ್ನ ಅಭಿರುಚಿಯನ್ನೂ ಕೊಡಮಾಡಿದೆ. ಮಹಿಳಾ ಕೇಂದ್ರಿತ ಪಾತ್ರಗಳು ಮಾತ್ರಚವಲ್ಲದೇ, ಎಲ್ಲ ಬಗೆಯ ಪಾತ್ರಗಳತ್ತಲೂ ಆಕ್ತಿ ಹೊಂದಿರುವ ಈ ಹುಡುಗಿ ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಾಯಕಿಯಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳೇ ದಟ್ಟವಾಗಿ ಗೋಚರಿಸುತ್ತಿವೆ. ಕೆಲವೇ ಕಂತುಗಳಷ್ಟು ಪ್ರಸಾರವಾಗಿದ್ದರೂ ಸೀತಾ ವಲ್ಲಭ ಧಾರಾವಾಹಿಯ ಮೂಲಕ ಮನಗೆದ್ದಿದ್ದ ಸುಪ್ರಿತಾಗೀಗ ಹಿರಿತೆರೆಯಲ್ಲಿಯೂ ಸುಗ್ಗಿ ಸಂಭ್ರಮ ಶುರುವಾಗಿದೆ!