ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ (ashish vidyarthi) ಅರವತ್ತನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿರೋ (marriage) ವಿಚಾರವೀಗ ಚರ್ಚೆಯ ಕೇಂದ್ರಬಿಂದು. ಸಾಮಾನ್ಯವಾಗಿ, ಹೀಗೆ ಸಂಧ್ಯಾ ಕಾಲದ ಅಂಚಿನಲ್ಲಿರುವವರ ಅಫೇರುಗಳು, ಮದುವೆ ಮತ್ತಿತ್ಯಾದಿ ಅಂಶಗಳೆಲ್ಲವನ್ನು ಈ ಸಮಾಜ ಮಡಿವಂತಿಕೆಯ ಭೂಮಿಕೆಯಲ್ಲಿ ಒರೆಗೆ ಹಚ್ಚುತ್ತೆ. ಕಾಮದ ಸುತ್ತಲೇ ಟೀಕೆಗಳು ಕೇಳಿ ಬರುತ್ತವೆ. ಸಿನಿಮಾಗಳಲ್ಲಿ ವಿಲನ್‍ಗಿರಿ ಮಾಡಿ ಪ್ರಸಿದ್ಧಿ ಪಡೆದರೂ, ನಿಜಜೀವನದಲ್ಲಿ ಎಂದಿಗೂ ಹೆಸರು ಕೆಡಿಸಿಕೊಳ್ಳದ ಬಹುಭಾಷಾನಟ ಆಶಿಶ್ ವಿದ್ಯಾರ್ಥಿಯೀಗ (ashish vidyarthi) ಅದೇ ತೆರನಾದ ವಿಮರ್ಶೆಗಳಿಗೆ, ಕಟು ಟೀಕೆಗಳಿಗೆ ಗುರಿಯಾಗಿ ಬಿಟ್ಟಿದ್ದಾರೆ.
ಅಷ್ಟಕ್ಕೂ ಆಶಿಶ್ ವಿದ್ಯಾರ್ಥಿ ಪರಭಾಷಾ ನಟನಾಗಿದ್ದರೂ ಕೂಡಾ ಕನ್ನಡದ ಪ್ರೇಕ್ಷಕರ ಪಾಲಗಾತ ಅಪರಿಚಿತರೇನಲ್ಲ. ಬಹುಶಃ ಭಾರತೀಯ ಚಿತ್ರರಂಗದ ಬುತೇಕ ಭಾಷೆಗಳಲ್ಲಿ ವಿಜೃಭಿಸಿದ ಕೆಲವೇ ಕೆಲ ನಟರ ಸಾಲಿನಲ್ಲಿ ಆಶಿಶ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕನ್ನಡದಲ್ಲಂತೂ ಅನೇಕ ಸಿನಿಮಾಗಳ ವಿಲನ್ ರೋಲ್‍ಗಳಲಿ ಅವರು ಅಕ್ಷರಶಃ ಅಬ್ಬರಿಸಿದ್ದಾರೆ. ಒಂದು ಕಾಲದಲ್ಲಿ ಅದ್ಯಾವ ಕನ್ನಡ ಸಿನಿಮಾ ಬಂದರೂ ಇವರದ್ದೊಂದು ಪಾತ್ರ ಇದ್ದೇ ಇರುತ್ತಿತ್ತು. ಅದನ್ನು ಕಂಡ ಕನ್ನಡದ ಅದೆಷ್ಟೋ ಪ್ರೇಕ್ಷಕರು ಆಶಿಶ್ ಕನ್ನಡದವರೇ ಅಂದುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಎಲ್ಲ ಭಾಗಳವರನ್ನೂ ಅವರಿಸಿಕೊಂಡಿದ್ದ ಆಇಶ್ ಇದೀಗ ಎರಡನೇ ಮದುವೆಯ ವಿಚಾರವಾಗಿ ಸುದ್ದಿ ಕೇಂದ್ರದಲ್ಲಿದ್ದಾರೆ.
2001ರಲ್ಲಿ ಖ್ಯಾತ ನಟಿ ಶಕುಂತಲಾ ಬರುವಾರ ಪುತ್ರಿ ರಾಜೋಶಿ ಬಹುವಾರನ್ನು ಮದುವೆಯಾಗಿದ್ದ ಆಶಿಶ್ ಎರಡು ದಶಕಗಳ ತುಂಬು ಸಂಸಾರ ನಡೆಸಿದ್ದಾರೆ. ಈ ದಾಂಪತ್ಯಕ್ಕೆ ಇಪ್ಪತ್ತೊಂದು ವರ್ಷದ ಮಗನೊಬ್ಬನಿದ್ದಾನೆ. ಇಂಥಾ ಹೊತ್ತಿನಲ್ಲಿ ಆಶಿಶ್ ಏಕಾಏಕಿ ಅಸ್ಸಾಂ ಮೂಲದ ರೂಪಾಲಿ ಬರುವಾರನ್ನು ಮದುವೆಯಾಗುತ್ತಾರೆಂದರೆ, ಅದು ಒಂದಷ್ಟು ಚರ್ಚೆಗೆ ಗ್ರಾಸವಾಗೋದು ಸಹಜವೇ. ಹಾಗಂತ, ಆಶಿಶ್ ಯಾವತ್ತಿಗೂ ಮೊದಲ ಹೆಂಡತಿಯೊಂದಿಗೆ ಕದನ ನಡೆಸಿದವರಲ್ಲ. ಆದರೂ ಗಂಡ ಹೆಂಡಿರ ನಡುವೆ ಜಗಳಕ್ಕಿಂತಲೂ ಘೋರವಾದ ಮಹಾ ಮೌನವೊಂದು ಬಹುಕಾಲದ ವರೆಗೂ ಚಾಲ್ತಿಯಲ್ಲಿತ್ತು. ಆ ಮೌನವೇ ಆಶಿಶ್‍ರನ್ನು ರೂಪಾಲಿಯತ್ತ ಕೈ ಚಾಚುವಂತೆ ಮಾಡಿತಾ? ಆ ವಿಚಿತ್ರ ಏಕಾಂಗಿತನವೇ ಮತ್ತೊಂದು ಆಪ್ಯಾಯ ಜೀವಕ್ಕಾಗಿ ಹಾತೊರೆಯುವಂತೆ ಮಾಡಿತಾ? ಗೊತ್ತಿಲ್ಲ!
ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಮಂದಿ ಮನಸಿಗೆ ಬಂದಂತೆ ಕೆರೆಯುತ್ತಾ ವಿಕೃತಾನಂದ ಪಡುತ್ತಿದ್ದಾರೆ. ಕಂಡ ಕಂಡಲ್ಲಿ ಪಿತಗುಡುತ್ತಿರುವ ಟ್ರೋಲರ್‍ಗಳು ಕೆಟ್ಟಾ ಕೊಳಕಾಗಿ ಆಶಿ ಮತ್ತು ರೂಪಾಲಿ ಮದುವೆಯನ್ನು ಆಡಿಕೊಳ್ಳುತ್ತಿದ್ದಾರೆ. ಅವರೆಲ್ಲರ ಮೆದುಳನ್ನು ಆವರಿಸಿಕೊಂಡಿರೋದು ಕೇವಲ ಸೆಕ್ಸ್ ಎಂಬ ಮಾಯೆಯಷ್ಟೇ. ಅರವತ್ತರ ಆಶಿಶ್ ರೂಪಾಲಿಯನ್ನು ಮದುವೆಯಾದದ್ದರ ಹಿಂದಿರೋದು ಸೆಕ್ಸ್ ಬಯಕೆ ಮಾತ್ರವೇ ಅಂತ ಅನೇಕರು ಷರಾ ಬರೆಯುತ್ತಿದ್ದಾರೆ. ಆದರೆ, ಮನುಷ್ಯಮಾತ್ರರ ಮಾನಸಿಕ ತುಮುಲಗಳು ಅದೆಲ್ಲವನ್ನೂ ಮೀರಿದಂಥವು. ಅದು ಯಾವ ವಯಸ್ಸಿನಲ್ಲಾದರೂ ಒಂದು ಜೀವದ ಆಮಿಪ್ಯಕ್ಕಾಗಿ ಹಂಬಲಿಸಬಹುದು. ಒಂದು ಅಫೇರಿಗೆ ಅಂಟಿಕೊಳ್ಳಬಹುದು. ಅಲ್ಲಿ ಹೆಚ್ಚಿನ ಸಂದರ್ಭದಲ್ಲಿ ಭಾವುಕತೆಯ ಹಾಜರಿ ಇರುತ್ತೆ. ದುರಂತವೆಂದರೆ, ಕೆಲ ಕಾಮಾಲೆ ಕಣ್ಣಿಗೆಗೆ ಗೋಚರಿಸೋದು ಬರೀ ಕಾಮ ಮಾತ್ರ!