ನಟ ಆದಿತ್ಯ ಪಕ್ಕಾ ಟೆರರ್ (terror kannada movie) ಅವತಾರದಲ್ಲಿ ಮರಳಿದ್ದಾರೆ. ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ (actor aadithya) ಆದಿತ್ಯ ಪಾಲಿಗೆ ಮಾಸ್ ಇಮೇಜೊಂದು ಹಬ್ಬಿಕೊಂಡಿದೆ. ಆ ಇಮೇಜು ಮುಕ್ಕಾಗದಂತೆ ಒಂದಷ್ಟು ಪಾತ್ರಗಳನನು ನಿರ್ವಹಿಸಿರುವ ಆದಿತ್ಯ ನಟಿಸಿರುವ ಹೊಸಾ ಚಿತ್ರ `ಟೆರರ್’. ಶೀರ್ಷಿಕೆ ಕೇಳಿದರೇನೇ ಇದೊಂದು ಪಕ್ಕಾ ಮಾಸ್ ಚಿತ್ರವೆಂಬ ನಿಖರ ಸುಳಿವು ಸಿಕ್ಕಿ ಬಿಡುತ್ತದೆ. ಈ ಹಿಂದೆ ಬಿಡುಗಡೆಗೊಂಡಿದ್ದ ಟೀಸರ್ ಮೂಲಕ ಅದಕ್ಕೆ ಪೂರಕವಾದ ಒಂದಷ್ಟು ಅಂಶಗಗಳು ಜಾಹೀರಾಗಿದ್ದವು. ಇದೀಗ ಬಿಡುಗಡೆಗೆ ತಯಾರಾಗಿ ನಿಂತಿರುವ ಟೆರ್ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಒಂದು ಲಾಂಚ್ ಆಗಿದೆ. ಅದು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಹೆಚ್ಚೆಚ್ಚು ವೀಕ್ಷಣೆ ಕಾಣುತ್ತಾ, ಭರಪೂರ ಮೆಚ್ಚುಗೆ ಗಳಿಸುತ್ತಾ ಗುನುಗುನಿಸಿಕೊಳ್ಳುತ್ತಿದೆ!
ಈ ವೀಡಿಯೋ ಸಾಂಗ್ ನಲ್ಲಿ ರಾವಣನ ರೂಪಕದ ಮೂಲಕ ಆದಿತ್ಯ ಪಾತ್ರದ ನಾನಾ ಮಜಲುಗಳು ಅನಾವರಣಗೊಂಡಿವೆ. ಒಂದಷ್ಟು ಕಾಲದ ನಂತರ ಸದರಿ ಹಾಡಿನೊಂದಿಗೆ ಖ್ಯಾತ ಗಾಯಕ ಕೈಲಾಶ್ ಖೇರ್ ಕನ್ನಡಕ್ಕೆ ಮರಳಿದ್ದಾರೆ. ಡಾ.ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ಈ ಹಾಡಿಗೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಂಆರ್ ಟಿ ಮ್ಯೂಸಿಕ್ ಚಾನೆಲ್ ಮೂಲಕ ಬಿಡುಗಡೆಗೊಂಡಿರೋ ಈ ಹಾಡು ತನ್ನ ಮಾಸ್ ಗುಣಗಳಿಂದ ಪಡ್ಡೆ ಹೈಕಳ ಫೇವರಿಟ್ ಗೀತೆಯಾಗುವತ್ತ ದಾಪುಗಾಲಿಡುತ್ತಿದೆ. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆಯತ್ತ ಮುಖ ಮಾಡಿರುವ ಚಿತ್ರತಂಡ, ಈ ವೀಡಿಯೋ ಸಾಂಗಿನ ಬಗ್ಗೆ ಕೇಳಿ ಬರುತ್ತಿರುವ ಮೆಚ್ಚುಗೆಗಳಿಂದ ಖುಷಿಗೊಂಡಿದೆ.
ಅಂದಿಹಾಗೆ, ಇದು ರಂಜನ್ ಶಿವರಾಮ್ ಗೌಡ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ. ಈಗಾಗಲೇ ದಶಕಗಳಿಗೂ ಹೆಚ್ಚು ಕಾಲದಿಂದ ಘಟಾನುಘಟಿ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವವರು ರಂಜನ್. ನಿರ್ದೇಶನ ವಿಭಾಗದಲ್ಲಿ ಸಾಕಷ್ಟು ಅನುಭವ ಪಡೆದುಕೊಂಡಿರುವ ಅವರು ಕಟ್ಟುಮಸ್ತಾದ ಕಥೆಯೊಂದನ್ನು ಸಿದ್ಧಪಡಿಸಿ, ವರ್ಷಗಟ್ಟಲೆ ಅದಕ್ಕಾಗಿ ತಯಾರಿ ನಡೆಸಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಸಿಲ್ಕ್ ಮಂಜು ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಹಾಗಾದರೆ, ಇದು ಯಾವ ಜಾನರಿಗೊಳಪಡುವ ಸಿನಿಮಾ? ಮಾಸ್ ಅಂಶದ ಆಚೀಚೆ ಮತ್ಯಾವ ಬೆರಗುಗಳಿದ್ದಾವೆ? ಟೆರರ್ ಒಳಗೊಂಡಿರಬಹುದಾದ ಹೊಸತನ ಎಂಥಾದ್ದು? ಇಂಥಾ ಅನೇಕ ಪ್ರಶ್ನೆಗಳಿಗುತ್ತರವಾಗಿ ಒಂದಷ್ಟು ವಿಚಾರಗಳನ್ನು ನಿರ್ದೇಶಕರು ಹಂಚಿಕೊಂಡಿದ್ದಾರೆ.
ನಿರ್ದೇಶಕ ರಂಜನ್ ಶಿವರಾಮ್ ಗೌಡ ಈ ಕಥೆಯನ್ನು ಸಿದ್ಧಪಡಿಸುವ ಹೊತ್ತಿನಲ್ಲಿಯೇ ಅದರ ಪಾತ್ರಗಳಿಗೆ ಇಂತಿಂಥಾ ಕಲಾವಿದರೇ ಸೂಕ್ತ ಅನ್ನೋದನ್ನು ನಿರ್ಧರಿಸಿದ್ದರಂತೆ. ಈ ಹಂತದಲ್ಲಿಯೇ ಆದಿತ್ಯ ಅವರೇ ನಾಯಕನ ಪಾತ್ರವನ್ನ ನಿಭಾಯಿಸಬೇಕೆಂಬ ಇಂಗಿತ ಅವರದ್ದಾಗಿತ್ತು. ಕಡೆಗೂ ಅವರನ್ನು ಸಂಪರ್ಕಿಸಿ ಕಥೆ ಹೇಳಿದಾಗ ಅತ್ಯಂತ ಸಂಭ್ರಮದಿಂದಲೇ ಒಪ್ಪಿಕೊಂಡಿದ್ದಾರೆ. ಸಾಕಷ್ಟು ಕಸರತ್ತು ನಡೆಸಿರೋ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಶೇಷವೆಂದರೆ, ದೇವರಾಜ್ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಈ ಸಿನಿಮಾದ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದೆ. ಅದರ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಚಿತ್ರತಂಡ ಇಷ್ಟರಲ್ಲಿಯೇ ಪ್ರೇಕ್ಷಕರ ಮುಂದೆ ತೆರೆದಿಡಲಿದೆ.
ವಿಶೇಷವೆಂದರೆ, ಶ್ರೀನಗರ ಕಿಟ್ಟಿ ಕೂಡಾ ವಿಶೇಷ ಪಾತ್ರದ ಮೂಲಕ ಟೆರರ್ ಗೆ ಸಾಥ್ ಕೊಟ್ಟಿದ್ದಾರೆ. ಸಾಮಾನ್ಯವಾಗಿ ನಾಯಕ ನಟರು ಬೇರೆ ನಟರ ಸಿನಿಮಾಗಳಲ್ಲಿ ಪಾತ್ರಗಳನ್ನು ನಿರ್ವಹಿಸೋದೇ ಅಪರೂಪ. ಆದರೆ, ಶ್ರೀನಗರ ಕಿಟ್ಟಿ ಅತ್ಯಂತ ಇಷ್ಟಪಟ್ಟು ಆ ಪಾತ್ರಕ್ಕೆ ಜೀವ ತುಂಬಿದ್ದಾರಂತೆ. ಇದುವರೆಗೂ ಚಿತ್ರತಂಡ ಕಿಟ್ಟಿ ಪ;ಆತ್ರದ ಬಗ್ಗೆ ಸಣ್ಣದೊಂದು ಸುಳಿವನ್ನೂ ಬಿಟ್ಟುಕೊಡದಂತೆ ಗೌಪ್ಯತೆ ಕಾಪಾಡಿಕೊಂಡಿದೆ. ಅಂತೂ ಕಿಟ್ಟಿಯ ಪಾತ್ರ ಮಾಸ್ ಲುಕ್ಕಲ್ಲಿ ಕ್ರೇಜಿನ ಕಿಡಿ ಹೊತ್ತಿಸೋ ಲಕ್ಷಣಗಳು ಗಟ್ಟವಾಗಿ ಗೋಚರಿಸಲಾರಂಭಿಸಿವೆ. ಇನ್ನುಳಿದಂತೆ, ಕನ್ನಡ ಚಿತ್ರರಂಗಕ್ಕೆ `ಎ’ಯಂಥಾ ಸಾರ್ವಕಾಲಿಕ ಹಿಟ್ ಸಿನಿಮಾ ಕೊಟ್ಟಿದ್ದವರು ನಿರ್ಮಾಪಕ ಸಿಲ್ಕ್ ಮಂಜು. ಇದೀಗ ರಂಜನ್ ಸೃಷ್ಟಿಸಿದ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡು ಸಿಲ್ಕ್ ಮಂಜು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಟೆರರ್ ಮೇ ತಿಂಗಳ ಅಂತ್ಯ ಭಾಗದಲ್ಲಿ ತೆರೆಗಾಣುವ ಸಾಧ್ಯತೆಗಳಿದ್ದಾವೆ.