ಕಂಗಾಲು ಮಾತೆಯ ಮಗ್ಗುಲಲ್ಲಿ ಬೊಮ್ಮಣ್ಣನ ಅಳೀಮಯ್ಯ!
ರೇಣುಕಾ ಸ್ವಾಮಿ ಕೊಲೆ ಕೇಸಿನ ಸಂಬಂಧವಾಗಿ ಬೇಲ್ ಪಡೆದು ನಿರಾಳವಾಗಿರೋ ದರ್ಶನ್ ಇದೀಗ ಫಾರ್ಮಿಗೆ ಮರಳಿದಂತಿದೆ. ಓರ್ವ ಸ್ಟಾರ್ ನಟನಾಗಿ ವಿವಾದಾತ್ಮಕ ವ್ಯಕ್ತಿತ್ವ ಹೊಂದಿದ್ದಾತ ದರ್ಶನ್. ಒಂದು ಹಂತದಲ್ಲಿ ಸುತ್ತ ಹಲಾಲುಟೋಪಿಗಳನ್ನೇ ತುಂಬಿಕೊಂಡು ತಪ್ಪ್ಯಾವುದು, ಸರಿ ಯಾವುದೆಂಬ ಗಡಿರೇಖೆಯನ್ನೇ ಗುರುತಿಸದಷ್ಟು ಪ್ರಮಾಣದ ಕೊಲೆಸ್ಟ್ರಾಲು ದಾಸನ ಕಣ್ಣಿನವರೆಗೂ ಹಬ್ಬಿಕೊಂಡಿತ್ತು. ಇದೀಗ ತಿಂಗಳುಗಟ್ಟಲೆ ಜೈಲಲ್ಲಿ ಕಳೆದ ದರ್ಶನ್ ಪಾಲಿಗೆ ವಾಸ್ತವದ ಸತ್ಯ ದರ್ಶನವಾಗಿರೋ ಸೂಚನೆ ಸಿಕ್ಕಿದೆ. ಅಷ್ಟಕ್ಕೂ ಖ್ಯಾತಿಯ ಪ್ರಭೆಯಲ್ಲಿ ನಿಂತಾಗಲೂ, ವಿವೇಚನೆಯ ಒಳಗಣ್ಣ ತೆರೆದಿಟ್ಟುಕೊಳ್ಳೋದು ಒಂದು ಕಲೆ. ಅದನ್ನು ಸಿದ್ಧಿಸಿಕೊಂಡವರು ಮಾತ್ರವೇ ಸುಖಾಸುಮ್ಮನೆ ರಂಕಲು ಮಾಡಿಕೊಳ್ಳದೆ ಚೆಂದಗೆ ಬಾಳಿ ಹೋಗಿದ್ದಾರೆ. ಆದರೆ, ದಾಸ ಮಾತ್ರ ತಾನು ಡೋಂಟ್ ಕೇರ್ ಬ್ರ್ಯಾಂಡೆಂಬ ಭ್ರಮೆಯನ್ನು ಅಪಾದಮಸ್ತಕ ಹೊದ್ದುಕೊಂಡು ತಿರುಗಿದ್ದಿದೆ. ಇಂಥಾ ದರ್ಶನ್ಗೆ ತಾನು ಸಾಗಿ ಬಂದ ಹಾದಿಯತ್ತ ತಣ್ಣಗೆ ತಿರುಗಿ ನೋಡುವ ಅವಕಾಶ ಸಿಕ್ಕಿದ್ದು ಕಂಬಿಗಳ ಹಿಂದಷ್ಟೆ!
ಹಾಗಾದರೆ, ದರ್ಶನ್ ಈ ಸುದೀರ್ಘಾವಧಿಯ ವನವಾಸದ ಕಾಲಘಟ್ಟದಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಮನನ ಮಾಡಿಕೊಂಡರಾ? ತನ್ನ ಸುತ್ತ ಪಿತಗುಡುತ್ತಿದ್ದವರ, ಅದ್ಯಾವುದೋ ಲಾಭದ ಕಿಸುರಿಟ್ಟುಕೊಂಡೇ ತುದಿ ನಾಲಗೆಯ ಪ್ರೀತಿ ತೋರಿಸುತ್ತಿದ್ದವರ ಅಸಲೀಯತ್ತನ್ನು ಅರ್ಥ ಮಾಡಿಕೊಂಡರಾ? ಸದ್ಯ ಡೆವಿಲ್ ಅಖಾಡಕ್ಕೆ ಮರಳಿರುವ ದರ್ಶನ್ ಸೂಕ್ಷ್ಮ ವರ್ತನೆಗಳನ್ನು ಆಧರಿಸಿ ಹೇಳೋದಾದರೆ ಮೇಲ್ಕಂಡ ಪ್ರಶ್ನೆಗಳಿಗೆಲ್ಲ ಹೌದೆಂಬ ಉತ್ತರವೇ ಧ್ವನಿಸುತ್ತೆ. ಅದರಲ್ಲೂ ವಿಶೇಷವಾಗಿ ತಾನು ಪ್ರೀತಿಯಿಂದ ಸೆಲೆಬ್ರಿಟೀಸ್ ಅನ್ನುತ್ತಿದ್ದ ಅಭಿಮಾನಿ ಪಡೆಯ ದುಂಡಾವರ್ತನೆ, ಅತಿರೇಖದ ನಡವಳಿಕೆ, ಕಂಡವರ ಮೇಲೆರಗಿ ಹೋಗೋ ಪಡಪೋಶಿ ನಡವಳಿಕೆಗಳೂ ಕೂಡಾ ಖುದ್ದು ದರ್ಶನ್ ಗೆ ಅಸಹ್ಯ ಹುಟ್ಟಿಸಿದಂತಿದೆ!
ಅದರಲ್ಲಿಯೂ ವಿಶೇಷವಾಗಿ, ಸಾಕ್ಷಾತ್ತು ಅಮ್ಮನಂತೆ ಪೋಸು ಕೊಡುತ್ತಿದ್ದ ಅಂಬಿ ಮಡದಿ ಸುಮಲತಾ ಮತ್ತು ಆಕೆಯ ಮುದ್ದಿನ ಮಗ ಅಭಿಷೇಕನ ಅಸಲೀಯತ್ತಂತೂ ದರ್ಶನ್ ಗೆ ಸರಿಯಾಗಿಯೇ ಅರ್ಥವಾಗಿದೆ. ಈ ಕಾರಣದಿಂದಲೇ ದರ್ಶನ್ ತನ್ನ ಸೋಶಿಯಲ್ ಮೀಡಿಯಾ ಅಕೌಂಟುಗಳಲ್ಲಿ ಅಮ್ಮ, ಮಗ ಮತ್ತು ಸೊಸೆಯನ್ನು ಅನ್ ಫಾಲೋ ಮಾಡಿದ್ದೆಂಬಂಥಾ ವಿಶ್ಲೇಷಣೆಗಳೂ ಪುಂಖಾನುಪುಂಖವಾಗಿ ಕೇಳಿ ಬರುತ್ತಿವೆ. ಹಾಗೆ ನೋಡಿದರೆ, ದರ್ಶನ್ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಕೂಡಾ ಸುಮಲತಾ ವಿರುದ್ಧ ಸಹಜವಾಗಿಯೇ ಸಿಟ್ಟು ಮೂಡಿಕೊಳ್ಳುತ್ತಿತ್ತು. ಸುಮಲತಾ ರಾಜಕೀಯ ಅಖಾಡದಲ್ಲಿ ನಿಂತು ದರ್ಶನ್ ತನ್ನ ದೊಡ್ಡ ಮಗ ಅಂತ ಸಾರಿ ಸಾರಿ ಹೇಳಿಕೊಂಡಿದ್ದಿದೆ. ಆಕೆಯ ಮಗ ಅಭಿ ಕೂಡಾ ದರ್ಶನ್ ತನ್ನಣ್ಣ ಎಂಬರ್ಥದಲ್ಲಿ ಆಗಾಗ ಮೈಲೇಜು ಗಿಟ್ಟಿಸಿಕೊಂಡಿದ್ದಿದೆ. ಆದರೆ ದಾಸ ಅನಾಹುತವೊಂದನ್ನು ಮಾಡಿಕೊಂಡು ಸಂಕಷ್ಟದಲ್ಲಿದ್ದಾಗ ಅಭಿನವ ತಮ್ಮನಾಗಲಿ, ದೇವರು ಕೊಟ್ಟ ಅಮ್ಮನಾಗಲಿ ಅತ್ತ ಸುಳಿಯಲೂ ಇಲ್ಲ.
ನಿಜ, ಹೆತ್ತವರು ಮಾತ್ರವೇ ಅಮ್ಮನಾಗಬೇಕೆಂದೇನಿಲ್ಲ. ಜಗತ್ತಿನ ಯಾವ ಹೆಣ್ಣು ಮಗಳಾದರೂ ಮತ್ಯಾರಿಗೋ ಅಮ್ಮ ಅಂತನ್ನಿಸಬಹುದು. ಆದರೆ, ಸುಮಲತಾ ಮೇಡಮ್ಮು ಮಾತ್ರ ದರ್ಶನ್ ಪಾಲಿಗೆ ಅಮ್ಮನಂತೆ ನಟಿಸಿದ್ದರೆನ್ನಿಸುತ್ತೆ. ಯಾಕೆಂದರೆ, ಮಗ ಅದೆಂಥಾದ್ದೇ ತಪ್ಪು ಮಾಡಿದ್ದರೂ, ಅದರ ಬಗ್ಗೆ ತಕರಾರುಗಳಿದ್ದರೂ ಜೊತೆ ನಿಲ್ಲುವಾಕೆ ಅಮ್ಮ. ತೀರಾ ಮಗ ತಪ್ಪೆಸಗಿದ್ದನ್ನು ಸಮರ್ಥನೆ ಮಾಡಿಕೊಳ್ಳಬೇಕೆಂದೇನಿಲ್ಲ; ಬಳಿ ಬಂದು ತುಸು ಗದರುವುದೂ ಕೂಡಾ ತಾಯ್ತನವೇ. ಆದರೆ ಸುಮಲತಾ ಮಾತ್ರ ದರ್ಶನ್ ಕಷ್ಟದ ಘಳಿಗೆಗಳಲ್ಲಿ ಅಂತಾ ತಾಯ್ತನ ತೋರಲಿಲ್ಲ. ಎಲ್ಲೋ ಅನಿವಾರ್ಯ ಅನ್ನಿಸಿದಾಗ ಒಂದೆರಡು ಮಾತಾಡಿದ್ದು ಬಿಟ್ಟರೆ, ಅಮ್ಮನಾಗಲಿ, ಪುತ್ರರತ್ನನಾಗಲಿ ತುಟಿ ಬಿಚ್ಚಲಿಲ್ಲ. ಯಾರ್ಯಾರೋ ಸರತಿಯಲ್ಲಿ ನಿಂತು, ಹರಸಾಹಸ ಪಟ್ಟು ದರ್ಶನ್ ಭೇಟಿಗೆ ಹಂಬಲಿಸಿದರೂ ಅಮ್ಮ ಮಗ ಅತ್ತ ಸುಳಿದಿರಲೂ ಇಲ್ಲ.
ಹೀಗೆ ನಾಜೂಕಿನ ನಡೆ ಅನುಸರಿಸಿದ್ದ ಸುಮಲತಾ ದರ್ಶನ್ ಕಡೆಯಿಂದ ಸರಿಕಟ್ಟಾಗಿಯೇ ಫಾಯಿದೆ ಗಿಟ್ಟಿಸಿಕೊಂಡಿದ್ದಾರೆ. ಅಂಬರೀಶ್ ಮರೆಯಾದ ನಂತರದಲ್ಲಿ ಆಕೆ ಏಕಾಏಕಿ ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕಿದ್ದರು. ಕಾಂಗ್ರೆಸ್, ಜೆಡಿಎಸ್ ಪಕ್ಷದ ಟಿಕೇಟು ಸಿಕ್ಕದೇ ಹೋದರೂ ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯದಿಂದ ಕಣಕ್ಕಿಳಿದಿದ್ದ ಸುಮಲತಾಗಿದ್ದ ಭರವಸೆ ಎರಡೇ ಎರಡು; ಒಂದು ಕಣ್ಣೀರು ಮತ್ತೊಂದು ಚಾಲೆಂಜಿಂಗ್ ಸ್ಟಾರ್ ದರ್ಶನ್. ರಾಜಕಾರಣಿಯಾಗಬೇಕೆಂಬ ಆಸೆಯಿಂದ ಸುಮಲತಾ ತಾಳಿದ್ದ ಅವತಾರಗಳೇನು ಒಂದೆರಡಲ್ಲ. ಹೇಳಿಕೇಳಿ ಮಂಡ್ಯ ಅನ್ನೋದು ರೆಬೆಲ್ ಸ್ಟಾರ್ ಅಂಬರೀಶ್ ಪಾಲಿನ ಅಭಿಮಾನದ ನೆಲೆ. ಅಂಥಾದ್ದೊಂದು ಸೆಂಟಿಮೆಂಟಿನಿಂದ ಒಂದಷ್ಟು ಮಂದಿ ಸುಲತಾ ಪರ ನಿಂತರೆ, ದರ್ಶನ್ ನೆರಳಿನಲ್ಲಿ ದೊಡ್ಡ ಮಟ್ಟದ ಬೆಂಬಲವೊಂದು ಸುಮಲತಾ ಸುತ್ತ ಚಿಗಿತುಕೊಂಡಿತ್ತು. ಪಳಗಿದ ರಾಜಕಾರಣಿಗಳ ಪಟ್ಟುಗಳಾಚೆಗೂ ಸುಮಲತಾ ಗೆದ್ದು ಬೀಗಿದ್ದರ ಹಿಂದೆ ದರ್ಶನ್ ಪ್ರಭೆಯೇ ದೊಡ್ಡ ಮಟ್ಟದಲ್ಲಿತ್ತು. ಹಾಗೆ ಸಂಸದೆಯಾಗುವಷ್ಟರ ಮಟ್ಟಿಗೆ ದರ್ಶನ್ ಪ್ರಭಾವಳಿಯನ್ನು ಬಳಸಿಕೊಂಡಿದ್ದ ಸುಮಲತಾ, ಆತ ಕಷ್ಟದಲ್ಲಿರುವಾಗ ಬಳಿ ಸುಳಿಯದಿದ್ದದ್ದು ಅಭಿಮಾನಿಗಳಿಗೆ ಮಾತ್ರವಲ್ಲದೆ, ಮಂಡ್ಯ ಸೀಮೆಯ ಸಾಮಾನ್ಯ ಮಂದಿಗೂ ರೇಜಿಗೆ ಮೂಡಿಸಿತ್ತು.
ಹೀಗೆ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಗುಲಿಕೊಂಡ ಕ್ಷಣದಿಂದಲೂ ಸುಮಲತಾ ನಾಜೂಕಿನಿಂದಲೇ ನಡೆದುಕೊಂಡಿದ್ದರು. ಈಗ ದರ್ಶನ್ ರೆಬೆಲ್ ಅವತಾರವೆತ್ತುತ್ತಲೇ ಮತ್ತದೇ ನಾಜೂಕುತನದಿಂದಲೇ ಪ್ರತಿಕ್ರಿಯಿಸಿದ್ದಾರೆ. ಹೀಗೆ ದೂರ ನಿಂತೇ ಹತ್ತಿರ ನಿಂತಂತೆ ತೋರ್ಪಡಿಸುತ್ತಿದ್ದ ಸುಮಲತಾ ಮತ್ತೊಂದು ಸುತ್ತಿಗೆ ದರ್ಶನ್ ಪ್ರಭೆಯನ್ನು ಬಳಸಿಕೊಳ್ಳಲು ಯೋಜಿಸಿದ್ದರಾ? ಒಳಗಿಂದೊಳಗೇ ಅಂಥಾದ್ದೊಂದು ತಯಾರಿ ನಡೆದಿತ್ತಾ? ಮಾಜಿ ಸಂಸದೆಯ ಆಪ್ತ ವಲಯದಿಂದ ಅಂಥಾದ್ದೊಂದು ಸುದ್ದಿ ತಿಂಗಳುಗಳ ಹಿಂದೆಯೇ ಜಾಹೀರಾಗಿತ್ತು. ಅದರನ್ವಯ ಹೇಳೋದಾದರೆ, ರಾಜಕೀಯದಲ್ಲಿ ಚಾಲ್ತಿಯಲ್ಲಿರುವ ಸಲುವಾಗಿ ಪುತ್ರ ಅಭಿಯನ್ನು ರಾಜಕೀಯ ಅಖಾಡಕ್ಕಿಳಿಸಲು ಸುಮಲತಾ ತಯಾರಿ ನಡೆಸಿದ್ದರು. ಸುಮಲತಾ ರಾಜಕೀಯ ಬದುಕು ಒಂದೇ ಅವಧಿಗೆ ಪರ್ಯಾವಸಾನ ಹೊಂದಿದೆ. ಕಣ್ಣೀರಿನ ವ್ಯಾಲಿಡಿಟಿ ಕೂಡಾ ಐದು ವರ್ಷದೊಳಗಾಗಿ ಮುಗಿದು ಹೋಗಿದೆ. ಹಾಗಂತ ಅವರೊಳಗಿರುವ ಅಧಿಕಾರದ ಲಾಲಸೆಗೆ ಮಾತ್ರ ವಯಸ್ಸಾಗಲಿ, ದಣಿವಾಗಲಿ ಖಂಡಿತಾ ಆಗಿಲ್ಲ.
ವರ್ಷಗಟ್ಟಲೆ ಕಟ್ಟುಮಸ್ತಾಗಿ ಬೆಳೆಸಿದ ಕಂಬಳದ ಕೋಣದಂತಿರೋ ಮಗರಾಯ ಹೀರೋ ಆಗಿ ನೆಲೆ ಕಂಡುಕೊಳ್ಳೋದು ಕಷ್ಟವೆಂಬ ವಿಚಾರ ಈಗಾಗಲೇ ಸುಮಲತಾರಿಗೆ ಅರಿವಾಗಿದೆ. ಹಾಗಂತ ತನ್ನದೇ ಕಾಸು ಹಾಕಿ ಮಗನನ್ನು ಹೀರೋ ಆಗಿ ನೆಲೆಗಾಣಿಸೋ ಮನಃಸ್ಥಿತಿಯೂ ಅವರಿಗಿಲ್ಲ. ಆಪ್ತ ವಲಯದಲ್ಲಿರೋ ರಾಕ್ ಲೈನ್ ವೆಂಕಣ್ಣ ಅಪ್ಪಿ ತಪ್ಪಿಯೂ ಅಭಿಯನ್ನು ಹಾಕಿಕೊಂಡೊಂದು ಸಿನಿಮಾ ಮಾಡೋ ರಿಸ್ಕು ತೆಗೆದುಕೊಳ್ಳೋ ಗೋಜಿಗೆ ಹೋಗುವುದಿಲ್ಲ. ಹೀಗಿರುವಾಗ ಮಗನನ್ನು ರಾಜಕೀಯ ಅಖಾಡಕ್ಕಿಳಿಸಿ, ಹೇಗಾದರೂ ಮಾಡಿ ಗೆಲ್ಲಿಸಿ ಅಧಿಕಾರ ಕೇಂದ್ರದಲ್ಲಿರುವ ಪ್ಲಾನೊಂದನ್ನು ಸುಮಲತಾ ಮಾಡಿದಂತಿತ್ತು. ಕಳೆದ ಚುನಾವಣೆಯ ಬಳಿಕ ಮಂಡ್ಯದಿಂದ ಅಕ್ಷರಶಃ ಗಾಯಬ್ ಆಗಿದ್ದ ಸುಮಲತಾ, ಈಗ್ಗೆ ತಿಂಗಳ ಹಿಂದೆ ಮತ್ತೆ ಮಂಡ್ಯ ಕ್ಷೇತ್ರದಲ್ಲಿ ಸುತ್ತಾಡುವ ಹೇಳಿಕೆ ಕೊಟ್ಟಿದ್ದರು. ಅದರ ಹಿಂದಿದ್ದದ್ದು ಮಗನ ಎಂಟ್ರಿಗೆ ಅಖಾಡ ಸಜ್ಜುಗೊಳಿಸುವ ಸಿದ್ಧತೆ ಅಂತೊಂದು ಗುಮಾನಿ ಬಲವಾಗಿಯೇ ಹಬ್ಬಿಕೊಂಡಿತ್ತು.
ಹಾಗೊಂದು ವೇಳೆ ಅಭಿ ರಾಜಕೀಯ ಅಖಾಡಕ್ಕಿಳಿದರೂ ಕೂಡಾ ಗೆದ್ದು ದಡ ಸೇರೋ ಯಾವ ಛಾರ್ಮ್ ಕೂಡಾ ಆತನಿಗಿಲ್ಲ. ಅಭಿಗೆ ಮತ್ತೆ ಸರಿಕಟ್ಟಾದ ಜೋಡೆತ್ತುಗಳ ಸಾಥ್ ಬೇಕಾಗುತ್ತೆ ಎಂಬ ವಿಚಾರ ಸುಮಲತಾರಿಗೆ ಗೊತ್ತಿಲ್ಲದ ವಾಸ್ತವವೇನಲ್ಲ. ಈ ಕಾರಣದಿಂದಲೇ ಅಣಿಗೊಳ್ಳಲಾರಂಭಿಸಿದ್ದ ಸುಮಲತಾ ಪಾಲಿಗೆ ದೊಡ್ಡ ಭರವಸೆಯಂತಿದ್ದದ್ದು ದರ್ಶನ್. ಕಳೆದ ಬಾರಿ ತನ್ನನ್ನು ದಡ ಸೇರಿಸಿದಂತೆಯೇ ದಾಸ ಮಗನನ್ನೂ ಗೆಲುವಿನ ಏಣಿ ಹತ್ತಿಸುತ್ತಾನೆ ಎಂಬಂಥಾ ನಂಬಿಕೆ ಆಕೆಯದ್ದಿದ್ದಂತಿದೆ. ಆದರೆ, ದರ್ಶನ್ ಸಂಕಷ್ಟ ಕಾಲದಲ್ಲಿನ ನಾಜೂಕಿನ ನಡೆಯೇ ಆಕೆಯ ಪಾಲಿಗೆ ಮುಳುವಾಗಿದೆ. ಸುಮಲತಾ ಚುನಾವಣಾ ಕಾಲದಲ್ಲಿ ಬಾತುಮೋರೆ ಮಾಡಿಕೊಂದು ದರ್ಶನ್ ತನ್ನ ದೊಡ್ಡಮಗ ಅಂದಿದ್ದರು. ಪದೇ ಪದೆ ಅದನ್ನೇ ಹೇಳಲಾರಂಭಿಸಿದ್ದರು. ಆದರೆ ದೊಡ್ಮಗನ ಬಾಟಮ್ಮಿಗೆ ಕೊಲೆ ಕೇಸು ಹೆಟ್ಟಿಕೊಂಡಾಕ್ಷಣವೇ ತಾಯಿ ಸುಮಲತೆ ಏಕಾಏಕಿ ಬಣ್ಣ ಬದಲಿಸಿ ಬಿಟ್ಟಿತ್ತು.
ನಿಜ, ಯಾರೇ ವ್ಯಕ್ತಿ ದೊಡ್ಡ ಮಟ್ಟದಲ್ಲಿ ತಪ್ಪು ಮಾಡಿದಾಗ ಆತನನ್ನು ಪರ ವಹಿಸಿಕೊಂಡು ಹೋಗಲಾಗೋದಿಲ್ಲ. ದರ್ಶನ್ ಪವಿತ್ರಾ ಗೌಡಳ ಮರ್ಜಿಗೆ ಬಿದ್ದು ಕೊಲೆ ಕೇಸಿನಲ್ಲಿ ಬಂಧಿಯಾದಾಗ ಬಹುತೇಕರು ಆತನನ್ನು ವಿರೋಧಿಸಿದ್ದು ಆ ಸೂಕ್ಷ್ಮವಂತಿಕೆಯಿಂದಲೇ. ಹಾಗಂತ ತೀರಾ ಹತ್ತಿರದ ಬಂಧಗಳು ಹಾಗೆ ನಿಷ್ಠುರವಾಗಿ ವರ್ತಿಸಲಾಗೋದಿಲ್ಲ. ಈ ಕಾರಣದಿಂದಲೇ ದರ್ಶನ್ಗಗ ಮಡದಿ ವಿಜಯಲಕ್ಷ್ಮಿ ಗಂಡನ ಪರವಾಗಿ ಕಾನೂನು ಮೂಲಕವೇ ಬಡಿದಾಡಿದ್ದರು. ಹಳೇಯ ಕಿಸುರೆಲ್ಲವನ್ನೂ ಮರೆತು ದಿನಕರ್ ಕೂಡಾ ಜೊತೆ ನಿಂತಿದ್ದರು. ಮೀನಮ್ಮ ಅಂಥಾ ಅನಾರೋಗ್ಯದ ನಡುವೆಯೂ ಜೈಲಿಗೆ ತೆರಳಿ ಮಗನ ನೆತ್ತಿ ನೇವರಿಸಿ ಭರವಸೆ ತುಂಬಿ ಬಂದಿದ್ದರು. ಆದರೆ, ಮಹಾ ಮಾತೆ ಸುಮಲತಾ ಆಗಲಿ, ಅವರ ಪುತ್ರ ಅಭಿಶೇಕ್ ಆಗಲಿ ಜೈಲಿನತ್ತ ಸುಳಿಯಲೂ ಇಲ್ಲ. ಇಂಥಾ ನೌಟಂಕಿ ಆಟಗಳನ್ನು ಕಂಡ ದರ್ಶನ್ ಅತ್ಯಂತ ನಿಷ್ಠುರವಾಗಿಯೇ ಅಮ್ಮ ಮಗನನ್ನು ದೂರವಿಟ್ಟಿದ್ದಾರೆ.
ದರ್ಶನ್ ಜಾಗದಲ್ಲಿ ಬೇರ್ಯಾರೇ ಇದ್ದಿದ್ದರೂ ಈ ವಿಚಾರದಲ್ಲಿ ಇಂಥಾದ್ದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಅಷ್ಟಕ್ಕೂ ಈ ಅಭಿ ಕೂಡಾ ದರ್ಶನ್ ನನ್ನಣ್ಣ ಅನ್ನುತ್ತಾ ಓಡಾಡಿದ್ದ. ಮಾಡಿದ್ದು ಒಂದೆರಡು ತಗಡು ಸಿನಿಮಾಗಳನ್ನಾದರೂ ತಾನೇನೋ ಸ್ಟಾರ್ ನಟ ಎಂಬಂತೆ ಬಿಲ್ಡಪ್ಪು ಕೊಟ್ಟುಕೊಂಡು ಅಡ್ಡಾಡಲಾರಂಭಿಸಿದ್ದ. ಥೇಟು ಅಂಬರೀಶ್ ಅವರಂತೆಯೇ ಮಾಧ್ಯಮದವರೊಂದಿಗೂ ವರ್ತಿಸಲು ಶುರುವಿಟ್ಟಿದ್ದ. ಅಂಬರೀಶ್ ಮತ್ತು ಮಾಧ್ಯಮ ಮಂದಿಯ ನಡುವಿದ್ದ ಸಲುಗೆ, ಪ್ರೀತಿಯೇ ಬೇರೆ ತೆರನಾದದ್ದು. ಈ ಅಭಿ ಅದನ್ನೇ ಅನುಕರಿಸಲು ನೋಡುತ್ತಿರೋ ವಿಚಾರ ಎಂಥಾವರಿಗೂ ರೇಜಿಗೆ ಮೂಡಿಸುತ್ತಿತ್ತು. ಇಂಥಾ ಅಭಿ ರಾಜಕಾರಣಿಯಾಗಿ ಈ ನೆಲದ ಜನಸಾಮಾನ್ಯರಿಗೆ ಒಳಿತಾಗುವಂಥಾದ್ದನ್ನು ಮಾಡುತ್ತಾನೆಂಬ ಯಾವ ನಂಬಿಕೆ, ಯಾರಲ್ಲಿಯೂ ಇಲ್ಲ.
ಆದರೆ ಮಾತೆ ಸುಮಲತಾಗೆ ನಟನಾಗಿ ಕವುಚಿಕೊಂಡ ತನ್ನ ಪುತ್ರನನ್ನು ರಾಜಕಾರಣಿಯಾಗಿಯಾದರೂ ನೆಲೆಗಾಣಿಸುವ ಇರಾದೆ ಇದೆ ಅಂತ ಆಪ್ತ ಬಳಗದಲ್ಲಿಯೇ ಗುಲ್ಲೆದ್ದಿದೆ. ಈ ಸಂಬಂಧವಾಗಿ ಮಂಡ್ಯ ಸೀಮೆಯ ಕೆಲ ಅಂಬಿ ಅಭಿಮಾನಿಗಳ ಮೂಲಕ ವೇದಿಕೆ ಸಜ್ಜುಗೊಳಿಸುವ ಪ್ರಯತ್ನವನ್ನೂ ನಡೆಸಿದ್ದರೆಂಬ ಮಾತಿದೆ. ಆದರೆ, ಅದು ಅವರ್ಯಾರಿಗೂ ಇಷ್ಟವಿಲ್ಲದೇ ಹೋದರೂ ಕೂಡಾ ಅಂಬಿ ಮೇಲೆನ ಅಭಿಮಾನದಿಂದ ಗೋಣಾಡಿಸಿ ಎದ್ದು ಹೋಗಿದ್ದಾರೆಂದೂ ಹೇಳಲಾಗುತ್ತಿದೆ. ಸದ್ಯಕ್ಕೆ ಸುಮಲತಾ ಮೊಮ್ಮಗನ ನಾಮಕರಣಕ್ಕೂ ದರ್ಶನ್ ನೆರಳು ಸೋಕಿಲ್ಲ. ಆದರೆ, ಅಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಕಳೆದ ಬಾರಿ ತನ್ನ ಪ್ರೀತಿಯ ಮಾಮ ಬೊಮ್ಮಣ್ಣನ ಪರವಾಗಿ ವ್ಯಾಪಕ ಪ್ರಚಾರ ನಡೆಸಿದ್ದವರು ಸುದೀಪ. ಲಾಟರಿ ಹೊಡೆದಂತೆ ಸಿಎಂ ಆಗಿ, ಪರಮ ಭ್ರಷ್ಟಾಚಾರ, ಲಂಗು ಲಗಾಮಿಲ್ಲದ ಆಡಳಿತ ವೈಖರಿಯಿಂದ ಅದಾಗಲೆ ಮಾಮ ಬೊಮ್ಮಣ್ಣ ಮಾನಗೆಡಿಸಿಕೊಂಡಾಗಿತ್ತು. ಅದನ್ನೂ ಲೆಕ್ಕಿಸದೆ ಆ ಆಸಾಮಿಯ ಪರವಾಗಿ ಕಿಚ್ಚ ಪ್ರಚಾರ ನಡೆಸಿದ್ದರೂ ಕೂಡಾ ಅವರ ಪ್ರೀತಿಯ ಮಾವ ಬೊಮ್ಮಣ್ಣ ಖಾಲಿ ನೆತ್ತಿಯಲ್ಲಿ ಮೂಡಿದ್ದ ಸೋಲಿನ ಬೆವರು ಒರೆಸಿಕೊಂಡು ಪಟ್ಟದಿಂದ ಇಳಿದು ಹೋಗುವಂತಾಗಿತ್ತು. ಹಾಗೆ ಮಾಮನ ಪರ ನಿಂತಿದ್ದ ಕಿಚ್ಚ ತನ್ನ ಮಗನ ಪರ ನಿಲ್ಲದಿರೋದಿಲ್ಲ ಎಂಬಂಥಾ ಕ್ಷೀಣ ಆಸೆಯೊಂದು ಸುಮಲತಾರಲ್ಲಿದ್ದಂತೆ ಕಾಣಿಸುತ್ತಿದೆ!